ADVERTISEMENT

ಜೆಪಿಎಸ್‌ ತಂತ್ರಜ್ಞಾನದಲ್ಲಿ ಭಾರತ ಆಗಲಿದೆ ಸಾರ್ವಭೌಮ

ಇಸ್ರೊದ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 15:20 IST
Last Updated 9 ಫೆಬ್ರುವರಿ 2020, 15:20 IST
ಬೀದರ್‌ನ ಬಸವಗಿರಿಯಲ್ಲಿ ಭಾನುವಾರ ನಡೆದ ವಚನ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಇಸ್ರೊದ ಅಧ್ಯಕ್ಷ ಕೆ.ಸಿವನ್‌ ಪರವಾಗಿ ಇಸ್ರೊದ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ ಅವರಿಗೆ ‘ಗುರುಬಸವ ಪುರಸ್ಕಾರ’ ಪ್ರದಾನ ಮಾಡಲಾಯಿತು. ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕೆ, ಡಾ.ಕಿರಣಕಮಾರ ಇದ್ದಾರೆ
ಬೀದರ್‌ನ ಬಸವಗಿರಿಯಲ್ಲಿ ಭಾನುವಾರ ನಡೆದ ವಚನ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಇಸ್ರೊದ ಅಧ್ಯಕ್ಷ ಕೆ.ಸಿವನ್‌ ಪರವಾಗಿ ಇಸ್ರೊದ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ ಅವರಿಗೆ ‘ಗುರುಬಸವ ಪುರಸ್ಕಾರ’ ಪ್ರದಾನ ಮಾಡಲಾಯಿತು. ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕೆ, ಡಾ.ಕಿರಣಕಮಾರ ಇದ್ದಾರೆ   

ಬೀದರ್: ‘ಅಂತರಿಕ್ಷ ತಂತ್ರಜ್ಞಾನದ ಕೆಲವು ಕ್ಷೇತ್ರಗಳಲ್ಲಿ ಭಾರತ ವಿಶ್ವದ ರಾಷ್ಟ್ರಗಳಲ್ಲೇ ಮುಂಚೂಣಿಯಲ್ಲಿದೆ. ಜೆಪಿಎಸ್‌ ತಂತ್ರಜ್ಞಾನದಲ್ಲಿ ಭಾರತ ಮುಂದೊಂದು ದಿನ ಸಾರ್ವಭೌಮ ಆಗಲಿದೆ’ ಎಂದು ಇಸ್ರೊದ ಮಾಜಿ ಅಧ್ಯಕ್ಷ ಡಾ.ಕಿರಣಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿಯ ಬಸವಗಿರಿಯಲ್ಲಿ ಭಾನುವಾರ ನಡೆದ ವಚನ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾರತೀಯ ಪ್ರಾದೇಶಿಕ ನಾವಿಕ ಉಪಗ್ರಹ ವ್ಯವಸ್ಥೆಯು ಪ್ರಪಂಚದ ನಾವಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ’ ಎಂದು ತಿಳಿಸಿದರು.

‘ಮೀನುಗಾರರು ನೈಸರ್ಗಿಕ ವಿಕೋಪ ಹಾಗೂ ಜಲ ಗಡಿ ತಲುಪಿದ ಸಂದರ್ಭದಲ್ಲಿ ಇಸ್ರೊದ ಜೆಪಿಎಸ್‌ ಸಾಧನ ತಕ್ಷಣ ಅವರ ಮೊಬೈಲ್‌ಗೆ ಸಂದೇಶ ಕಳಿಸುತ್ತಿದೆ. ಇದರಿಂದ ದೇಶದ ಜಲ ಗಡಿ ದಾಟದಂತಹ ಎಚ್ಚರಿಕೆ ದೊರೆಯುತ್ತಿದೆ. ಒಟ್ಟಾರೆ ಮೀನುಗಾರರ ಜೀವನಕ್ಕೆ ಹೆಚ್ಚಿನ ಸುರಕ್ಷತೆ ಲಭಿಸಿದೆ’ ಎಂದು ತಿಳಿಸಿದರು.

ADVERTISEMENT

‘ಮೊದಲು ನೈಸರ್ಗಿಕ ವಿಕೋಪಗಳಿಂದಾಗಿ ಕರಾವಳಿ ಪ್ರದೇಶದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು. ಹೊಸ ತಂತ್ರಜ್ಞಾನ ಬಂದ ಮೇಲೆ ಮೋಡಗಳ ಅಧ್ಯಯನದ ಮೂಲಕ ಅತಿವೃಷ್ಟಿ ಹಾಗೂ ಚಂಡಮಾರುತದ ಮಾಹಿತಿಯನ್ನು ಒಂದು ವಾರ ಮೊದಲೇ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ’ ಎಂದು ತಿಳಿಸಿದರು.

‘ಉಪಗ್ರಹದ ಮೂಲಕ ಗೋಧಿ, ಶೇಂಗಾ, ಹತ್ತಿ ಮೊದಲಾದ ಬೆಳೆಯ ಚಿತ್ರ ತೆಗೆದು ಇಳುವರಿ ಪತ್ತೆ ಮಾಡಿ ಸರ್ಕಾರಕ್ಕೆ ಮಾಹಿತಿ ಕೊಡಲಾಗುತ್ತಿದೆ. ಎಂಜಿಎನ್‌ಆರ್‌ಇಜಿ ಕಾಮಗಾರಿಯಲ್ಲಿನ ಪ್ರಗತಿಯನ್ನು ವೀಕ್ಷಿಸಿ ಮಾಹಿತಿಯನ್ನು ಶೇಖರಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.

‘ಅಂತರ್ಜಲಮಟ್ಟ ಗುರುತಿಸಿ 4 ಲಕ್ಷ ಕೊಳವೆಬಾವಿ ಕೊರೆಯಲು ಸಾಧ್ಯವಾಗಿದೆ. 1970ರಲ್ಲಿ ಅಮೆರಿಕದ ಹಳೆಯ ಉಪಗ್ರಹ ಖರೀದಿಸಿ 2,400 ಹಳ್ಳಿಗಳಿಗೆ ಏಕಕಾಲಕ್ಕೆ ಸಮುದಾಯ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಲಾಯಿತು. ಅದರ ಪ್ರತಿಫಲವಾಗಿ ತಂತ್ರಜ್ಞಾನ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ವಿಜ್ಞಾನಿ ಡಾ.ವಿಕ್ರಮ್‌ ಸಾರಾಭಾಯಿ ಅವರು ಅಂತರಿಕ್ಷ ವಿಜ್ಞಾನದಲ್ಲಿ ಮೈಲಿಗಲ್ಲು ಹಾಕಿದರು. 1963ರಲ್ಲಿ ಭೂಮಿಯಿಂದ ಬೇರೆ ಗ್ರಹಗಳಿಗೆ ಹೋಗಲು ರಾಕೆಟ್‌ ತಯಾರಿಸಿ ಉಡಾವಣೆ ಮಾಡಿದರು. ಮೀನುಗಾರರಿಂದ ಒಂದಿಷ್ಟು ಜಾಗ ಪಡೆದು ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲಿಸುತ್ತದೆ’ ಎಂದು ಹೇಳಿದರು.

ಡಾ. ಅಶೋಕ ಆಲೂರ ಅವರು ‘ಗುರುವಚನ ಸಾರ’ ದ ತೆಲುಗು ಆವೃತ್ತಿ ಬಿಡುಗಡೆ ಮಾಡಿದರು. ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಅಕ್ಕ ಅನ್ನಪೂರ್ಣ ನೇತೃತ್ವ ವಹಿಸಿದ್ದರು. ಸಾಹಿತಿ ರಂಜಾನ್ ದರ್ಗಾ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಈಶ್ವರ ಖಂಡ್ರೆ, ರಹೀಂಖಾನ್, ಗಣ್ಯರಾದ ಮಹಾಂತೇಶ ಬಿರಾದಾರ, ಬಸವರಾಜ ಬುಳ್ಳಾ, ಸುರೇಶ ಶರ್ಮಾ, ರಾಜಶೇಖರ ಯಂಕಂಚಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಗುರುನಾಥ ಕೊಳ್ಳೂರ, ಗುರುಬಸವ ಪ್ರಶಸ್ತಿ ದಾಸೋಹಿ ಸಂಗೀತಾ ಸಿ.ಎಸ್. ಗಣಾಚಾರಿ, ಸುರೇಶ ಚನಶೆಟ್ಟಿ, ಶಿವರಾಜ ಶಾಪೂರ್, ಮಹಾಂತೇಶ ಕುಂಬಾರ, ಮಡಿವಾಳಪ್ಪ ಮಂಗಲಗಿ, ಸೂರ್ಯಕಾಂತ ಅಲ್ಮಾಜೆ, ಪ್ರಭುರಾವ್‌ ವಸ್ಮತೆ, ನಾಗರಾಜ ಸೊರಳ್ಳಿ, ಮಲ್ಲಣ್ಣ ಮುಧೋಳ, ಬಿ.ಜಿ.ಶೆಟಕಾರ, ಪ್ರಸನ್ನಕುಮಾರ ಕೆ., ಐ.ಸಿ.ಪಟ್ಟಣಶೆಟ್ಟಿ, ಶಿವನಗೌಡ ಬಿರಾದಾರ, ಸತೀಶ ಪಾಟೀಲ, ರವೀಂದ್ರ ಖೂಬಾ, ಆನಂದ ದೇವಪ್ಪ ಇದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷ ಧನರಾಜ್‌ ತಾಳಂಪಳ್ಳಿ ಸ್ವಾಗತಿಸಿದರು. ರಮೇಶ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.