
ಬೀದರ್: ‘ಭಾರತ ಸಂವಿಧಾನ ಎಲ್ಲ ನಾಗರಿಕರಿಗೂ ಸಾಮಾಜಿಕ ನ್ಯಾಯ ಒದಗಿಸಿದೆ. ಸಮಾನತೆ, ಸ್ವಾತಂತ್ರ‍್ಯ ಹಾಗೂ ಎಲ್ಲರಿಗೂ ಅವಕಾಶ ನೀಡುವ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯದ ಹಕ್ಕು ನೀಡಿ ಸಮಾಜದಲ್ಲಿ ಗೌರವದಿಂದ ಬಾಳಲು ಅವಕಾಶ ಕಲ್ಪಿಸಿದೆ. ಹೀಗಾಗಿ ನಾವೆಲ್ಲ ಸಂವಿಧಾನದ ಆಶಯಗಳಂತೆ ಬಾಳಬೇಕಾಗಿದೆ’ ಎಂದರು.
‘1950 ಜನವರಿ 26ರಂದು ಸಂವಿಧಾನ ಜಾರಿಗೆ ಬಂದ ಮೇಲೆ ಒಂದು ಪರಿಪೂರ್ಣ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. 1946ರಲ್ಲಿ ಮೊದಲ ಸಂವಿಧಾನ ರಚನಾ ಸಭೆ ನಡೆಯಿತು, 1947 ಆಗಸ್ಟ್ 29 ರಂದು ಸಂವಿಧಾನ ಕರಡು ಸಮಿತಿ ರಚಿಸಿ ಅದರ ಅಧ್ಯಕ್ಷರಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಲಾಯಿತು. ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಾಯನ ಮಾಡಿ, ಜಗತ್ತಿನ ಶ್ರೇಷ್ಠ ಮತ್ತು ಅತಿ ದೊಡ್ಡ ಲಿಖಿತ ಸಂವಿಧಾನವನ್ನು ನಮಗೆ ನೀಡಿದ್ದಾರೆ’ ಎಂದು ತಿಳಿಸಿದರು.
‘ಸ್ವಾತಂತ್ರ್ಯ ಬಂದಾಗ ದೇಶದ ಬಡತನ ಹಾಗೂ ಆರ್ಥಿಕ ವ್ಯವಸ್ಥೆ ದುಸ್ಥಿತಿಯಲ್ಲಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ಸಂರ್ಕ ಕ್ರಾಂತಿ, ಉದ್ಯೋಗ ಸೃಷ್ಟಿ, ವಿಜ್ಞಾನ ತಂತ್ರಜ್ಞಾನ ಬೆಳವಣಿಗೆ, ಬಡತನ ನಿರ್ಮೂಲನೆ ಅಂತಹ ಹಲವು ಕ್ರಮಗಳನ್ನು ಕೈಗೊಂಡು ಪ್ರಗತಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸಲಾಗಿದೆ. ನಮ್ಮ ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತರುವುದರ ಮೂಲಕ ಜನರ ಜೀವನ ಮಟ್ಟ ಸುಧಾರಣೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಮಕ್ಕಳಿಗೆ 31 ಕೆ.ಪಿ.ಎಸ್ ಶಾಲೆ ಆರಂಭಿಸಲಾಗುತ್ತಿದೆ. ಕಾರ್ಮಿಕರ ಮಕ್ಕಳಿಗೆ ವಿಶೇಷವಾಗಿ ವಸತಿ ಶಾಲೆ ನಿರ್ಮಾಣ ಮಾಡಲಾಗುತ್ತಿದೆ. ಬೀದರ್ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ’ ಎಂದರು.
ಬೀದದ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ವಿಠಲದಾಸ ಪ್ಯಾಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಸಚಿವರು ಡಾ.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಅಧ್ಯಕ್ಷ ಬಾಬುರಾವ ಹೊನ್ನನಾಯ್ಕ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಬದೋಲೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಗೋವಿಂದ ಸ್ವಾಮಿಗಳು, ಭಂತೆ ಜ್ಞಾನಸಾಗರ, ಧಮ್ಮಕಿರ್ತ, ಅನೀಲ ಬೆಲ್ದಾರ್, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.