ADVERTISEMENT

ಬೀದರ್‌ | ಕೈಗಾರಿಕಾ ನಿವೇಶನ ದರ ಭಾರಿ ಏರಿಕೆ; ಕೈಗಾರಿಕೋದ್ಯಮಿಗಳಿಂದ ಅಪಸ್ವರ

ನಿರ್ಧಾರದಿಂದ ಉದ್ದಿಮೆ ಬೆಳವಣಿಗೆ ಕುಂಠಿತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 7:11 IST
Last Updated 3 ಆಗಸ್ಟ್ 2025, 7:11 IST
ಬಿ.ಜಿ.ಶೆಟಕಾರ್‌ 
ಬಿ.ಜಿ.ಶೆಟಕಾರ್‌    

ಬೀದರ್‌: ನಗರ ಹೊರವಲಯದ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಹೊಸ ಇಂಡಸ್ಟ್ರಿ ಸ್ಥಾಪನೆಗೆ ನಿವೇಶನಕ್ಕೆ ನಿಗದಿಪಡಿಸಿರುವ ದರದಲ್ಲಿ ಭಾರಿ ಏರಿಕೆ ಮಾಡಲಾಗಿದ್ದು, ಇದಕ್ಕೆ ಜಿಲ್ಲೆಯ ಉದ್ಯಮಿಗಳು ಅಪಸ್ವರ ತೆಗೆದಿದ್ದಾರೆ.

ಕೊಳಾರ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ಪ್ರತಿ ಎಕರೆ ಜಾಗಕ್ಕೆ ₹41 ಲಕ್ಷ ಬೆಲೆ ನಿಗದಿಪಡಿಸಲಾಗಿತ್ತು. ಅದನ್ನು ಈಗ ದಿಢೀರನೆ ₹87.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕ ಕೈಗಾರಿಕೆಗಳ ಪ್ರದೇಶಾಭಿವೃದ್ಧಿ ಮಂಡಳಿಯು ಈ ಕುರಿತು ಇತ್ತೀಚೆಗೆ ಆದೇಶ ಹೊರಡಿಸಿದೆ. ಇದಕ್ಕೆ ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸೇರಿದಂತೆ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಹೊಸ ಉದ್ದಿಮೆಗಳ ಸ್ಥಾಪನೆಗೆ ಕಡಿಮೆ ಬೆಲೆಯಲ್ಲಿ ಜಮೀನು ನೀಡಲಾಗುತ್ತಿದೆ. ಇಂತಹದ್ದರಲ್ಲಿ ಹಿಂದುಳಿದ ಜಿಲ್ಲೆಯಲ್ಲಿ ಜಾಗದ ಬೆಲೆಯಲ್ಲಿ ಭಾರಿ ಹೆಚ್ಚಳ ಮಾಡಿ, ಕೈಗಾರಿಕೆಗಳ ಬೆಳವಣಿಗೆಗೆ ಕೊಡಲಿ ಏಟು ಕೊಟ್ಟಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ADVERTISEMENT

ವಿರೋಧಕ್ಕೆ ಕಾರಣವೇನು?:

ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳು ಕೆಮಿಕಲ್‌, ಟೈರ್‌ ಪೈರೋಲಿಸಿಸ್‌ಗೆ ಸಂಬಂಧಿಸಿವೆ. ಸುತ್ತಮುತ್ತಲಿನ ಪ್ರದೇಶದ ನೆಲ, ಜಲ ರಾಸಾಯನಿಕದಿಂದ ವಿಷವಾಗಿದೆ. ಹೊಸಬರು ಕೈಗಾರಿಕೆಗಳನ್ನು ಸ್ಥಾಪಿಸಲು ಆಸಕ್ತಿ ತೋರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಾಗದ ಬೆಲೆ ಹೆಚ್ಚಿಸಿದರೆ ಯಾರಾದರೂ ಮುಂದೆ ಬರುತ್ತಾರಾ ಎಂಬುದು ಉದ್ಯಮಿಗಳ ಪ್ರಶ್ನೆ.

‘ಹೊಸ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು. ಅದು ಬಿಟ್ಟು ಅದಕ್ಕೆ ವ್ಯತಿರಿಕ್ತವಾದ ತೀರ್ಮಾನ ಕೈಗೊಂಡರೆ ಕೈಗಾರಿಕೆಗಳು ಸ್ಥಾಪನೆಯಾಗುವುದಾದರೂ ಹೇಗೆ? ಉದ್ಯೋಗ ಸೃಷ್ಟಿಯಾಗುವುದಾದರೂ ಹೇಗೆ? ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು’ ಎಂದು ಉದ್ಯಮಿ ಬಸವರಾಜ ಆಗ್ರಹಿಸಿದ್ದಾರೆ.

‘ಬೆಲೆ ಹೆಚ್ಚಿಸಿರುವ ಸರ್ಕಾರದ ನಿರ್ಧಾರದಿಂದ ಆಘಾತವಾಗಿದೆ. ಮೊದಲೇ ಯುವ ಉದ್ದಿಮೆದಾರರು ಮುಂದೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಿಸಿದರೆ ಯಾರು ಮುಂದೆ ಬರುವುದಿಲ್ಲ. ಯಾರೇ, ಎಲ್ಲಿಯೇ ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದರೆ ಅವರಿಗೆ ವಿಶೇಷ ವಿನಾಯಿತಿ ನೀಡಬೇಕು. ದರ ಹೆಚ್ಚಿಸಿರುವುದು ಅವೈಜ್ಞಾನಿಕವಾದ ನಿರ್ಧಾರ. ಕೂಡಲೇ ವಾಪಸ್‌ ಪಡೆಯಬೇಕು’ ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಕಾರ್ಯದರ್ಶಿ ವೀರೇಂದ್ರ ಶಾಸ್ತ್ರಿ ಒತ್ತಾಯಿಸಿದ್ದಾರೆ.

ದರ ಹೆಚ್ಚಿಸಿ ನಿರ್ಧಾರ ಕೈಗೊಂಡಿರುವ ಕೆಐಎಡಿಬಿಗೆ ತನ್ನ ತೀರ್ಮಾನ ಹಿಂಪಡೆಯಲು ಸೂಚಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ದೇಶನ ನೀಡಬೇಕೆಂದು ಅವರಿಗೆ ಪತ್ರ ಬರೆದು ಕೋರಿದ್ದೇನೆ.
–ಬಿ.ಜಿ. ಶೆಟಕಾರ ಅಧ್ಯಕ್ಷ ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.