ADVERTISEMENT

ತೊಗರಿಗೆ ಹಸಿರು ಕಾಯಿಕೊರಕ ಬಾಧೆ

ಕೃಷಿ ವಿಜ್ಞಾನಿಗಳು, ಅಧಿಕಾರಿಗಳ ಜಂಟಿ ಕ್ಷಿಪ್ರ ಸಂಚಾರ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 12:57 IST
Last Updated 24 ನವೆಂಬರ್ 2021, 12:57 IST
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳು ತೊಗರಿ ಬೆಳೆ ಪರಿಶೀಲನೆ ನಡೆಸಿದರು
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳು ತೊಗರಿ ಬೆಳೆ ಪರಿಶೀಲನೆ ನಡೆಸಿದರು   

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ತೊಗರಿಯಲ್ಲಿ ಹಸಿರು ಕಾಯಿಕೊರಕ ಬಾಧೆ ಕಂಡು ಬಂದಿದೆ.

ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆ ನಡೆಸಿದ ಜಂಟಿ ಕ್ಷಿಪ್ರ ಸಂಚಾರ ಸಮೀಕ್ಷೆ ವೇಳೆ ಹಸಿರು ಕಾಯಿಕೊರಕ ತೊಗರಿಗೆ ಬಾಧೆ ಉಂಟು ಮಾಡುತ್ತಿರುವುದು ಪತ್ತೆಯಾಗಿದೆ.

ಬೀದರ್ ತಾಲ್ಲೂಕಿನ ಕೊಳಾರ, ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿ, ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಗ್ರಾಮಗಳ ಹೊಲಗಳಲ್ಲಿ ಹಸಿರು ಕಾಯಿಕೊರಕ ಬಾಧೆ ಕಾಣಿಸಿದೆ. ಕೀಟ ಆರ್ಥಿಕ ನಷ್ಟದ ರೇಖೆ ತಲುಪಿಲ್ಲ. ಪ್ರತಿ ಗಿಡಕ್ಕೆ 2 ಮೊಟ್ಟೆ ಅಥವಾ 1 ಕೀಡೆ ಕಂಡು ಬಂದರೆ ರೈತರು ತಕ್ಷಣ ಇಮಾಮೆಕ್ಟಿನ್ ಬೆಂಜೊಯೇಟ್ ಪ್ರತಿ ಲೀಟರ್ ನೀರಿಗೆ 0.2 ಗ್ರಾಂ ಅಥವಾ ಕ್ಲೋರ್ಯಾಂಟ್ರನಿಲಿಪ್ರೋಲ್ ಪ್ರತಿ ಲೀಟರ್‍ಗೆ 0.15 ಮಿ.ಲೀ. ಅಥವಾ ಫ್ಲೊಬೆಂಡಿಯಮಾಯಿಡ್ ಪ್ರತಿ ಲೀಟರ್‍ಗೆ 0.075 ಮಿ.ಲೀ. ಬೆರೆಸಿ ಸಿಂಪಡಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಸಲಹೆ ನೀಡಿದ್ದಾರೆ.

ADVERTISEMENT

ತೊಗರಿಯಲ್ಲಿ ಸರ್ಕೊಸ್ಪೊರಾ ಎಲೆ ಚುಕ್ಕೆ ರೋಗ ಹಾಗೂ ಹೂವು ಉದುರುವುದು ಕಂಡು ಬಂದಲ್ಲಿ ನಿರ್ವಹಣೆಗಾಗಿ ಕಾರ್ಬನ್‍ಡೈಜಿಮ್ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಅಥವಾ ಹೆಕ್ಸಾಕೊನೊಝೋಲ್ ಪ್ರತಿ ಲೀಟರ್‍ಗೆ 1 ಮಿಲಿ ಲೀಟರ್ ಜತೆಗೆ ಎನ್‍ಎ.ಎ. ಪ್ರತಿ ಲೀಟರ್‍ಗೆ 0.5 ಮಿ.ಲೀ. ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.

ಹುಮನಾಬಾದ್ ತಾಲ್ಲೂಕಿನ ನಿರ್ಣಾ, ವಿಠ್ಠಲಪುರ, ಬೇಮಳಖೇಡದಲ್ಲಿ ಜೋಳಕ್ಕೆ ಸೈನಿಕ ಹುಳುವಿನ ಬಾಧೆ, ಕಡಲೆ ಬೆಳೆಯಲ್ಲಿ ನೆಟೆ ರೋಗ ಬಾಧೆ ಕಾಣಿಸಿದೆ. ನಿರ್ವಹಣಾ ಕ್ರಮಗಳ ಕುರಿತು ರೈತರು ಕೃಷಿ ವಿಜ್ಞಾನ ಕೇಂದ್ರ ಅಥವಾ ಸಮೀಪದ ಕೃಷಿ ಇಲಾಖೆ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಸಮೀಕ್ಷೆ ತಂಡದಲ್ಲಿ ಕೃಷಿ ವಿಜ್ಞಾನಿ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಹುಮನಾಬಾದ್ ಸಹಾಯಕ ಕೃಷಿ ನಿರ್ದೇಶಕ ಗೌತಮ, ಕೃಷಿ ಅಧಿಕಾರಿ ಕೈಲಾಶ, ರಾಜೇಶ್ವರ ರೈತ ಸಂಪರ್ಕ ಕೇಂದ್ರದ ವಾಡೇಕರ್, ಆತ್ಮ ಯೋಜನೆ ಅಧಿಕಾರಿ ಯಶವಂತ, ಕೃಷ್ಣ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.