ADVERTISEMENT

ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ: ಬೀದರ್ ಜಿಲ್ಲಾ ಜಿಲ್ಲಾಧಿಕಾರಿ ಮನವಿ

ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 19:31 IST
Last Updated 19 ಆಗಸ್ಟ್ 2020, 19:31 IST
ಬೀದರ್‌ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗಣೇಶೋತ್ಸವ ಹಾಗೂ ಮೊಹರಂ ಪ್ರಯುಕ್ತ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್‌. ಮಾತನಾಡಿದರು
ಬೀದರ್‌ನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗಣೇಶೋತ್ಸವ ಹಾಗೂ ಮೊಹರಂ ಪ್ರಯುಕ್ತ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್‌. ಮಾತನಾಡಿದರು   

ಬೀದರ್: ಜಿಲ್ಲೆಯಲ್ಲಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಕಾಪಾಡಲು ಒತ್ತು ಕೊಡಬೇಕು. ಹಬ್ಬದ ಸಂಭ್ರಮದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶಗಳನ್ನು ಚಾಚೂತಪ್ಪದೇ ಪಾಲಿಸಬೇಕು. ಈ ಮೂಲಕ ಕೊರೊನಾ ಸೋಂಕು ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಮನವಿ ಮಾಡಿದರು.

ಗಣೇಶೋತ್ಸವ ಮತ್ತು ಮೋಹರಂ ಆಚರಣೆಗೆ ಸಂಬಂಧಿಸಿದಂತೆ ಇಲ್ಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಪರಿಸರದ ಹಿತದೃಷ್ಟಿಯಿಂದ ಪಿಒಪಿ ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ರತಿಯೊಬ್ಬರೂ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಲ್ಲಿ ಪಿಓಪಿ ಮೂರ್ತಿಗಳು ಜಿಲ್ಲೆಯ ಒಳಗೆ ಪ್ರವೇಶಿಸುವುದಿಲ್ಲ ಎಂದು ರಾಮಚಂದ್ರನ್‌ ಆರ್‌. ತಿಳಿಸಿದರು.

ADVERTISEMENT

ಸರ್ಕಾರದ ಮಾರ್ಗಸೂಚಿಯಂತೆಯೇ ಮೋಹರಂ ಆಚರಣೆ ನಡೆಯಬೇಕು. ಮಾಸ್ಕ್‌ ಧರಿಸುವುದು ಹಾಗೂ ಸುರಕ್ಷಿತ ಅಂತರ ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

ಕೊರೊನಾ ಸೋಂಕು ಜಿಲ್ಲೆಯಲ್ಲಿ ಹರಡುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಯಾವುದೇ ಹಬ್ಬ ಬರಲಿ ಒಂದು ವರ್ಷದ ಮಟ್ಟಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸುವ ನಿಯಮಗಳನ್ನು ಪಾಲಿಸಬೇಕು ಎಂದು ಎಂದು ತಿಳಿಸಿದರು.

ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸುವುದನ್ನು ನಿರ್ಬಂಧಿಸಲಾಗಿದೆ. ಎಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎನ್ನುವ ಪಟ್ಟಿಯನ್ನು ಗಣೇಶ ಮಹಾಮಂಡಳದವರು ಪೊಲೀಸ್ ಠಾಣೆಗೆ ನೀಡಬೇಕು. ಮೂರ್ತಿ ಪ್ರತಿಷ್ಠಾಪಿಸುವ ಮತ್ತು ವಿಸರ್ಜಿಸುವ ದಿನಗಳಂದು ಮೆರವಣಿಗೆ ನಡೆಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ಹೇಳಿದರು.

ಈ ಬಾರಿ ಡಿಜೆಗೆ ಮತ್ತು ರಸ್ತೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ಕೋವಿಡ್ ಪ್ರಯುಕ್ತ ಪ್ರಸಾದ ಮತ್ತು ತೀರ್ಥ ಹಂಚಬಾರದು. ಒತ್ತಾಯಪೂರ್ವಕವಾಗಿ ಚಂದಾ ವಸೂಲಿ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಗಣೇಶ ಮಹಾಮಂಡಳದವರು ಸ್ವಯಂ ಸೇವಕರ ಪಟ್ಟಿಯನ್ನು ಮುಂಚಿತವಾಗಿಯೇ ನೀಡಬೇಕು. ಪೆಂಡಾಲ್‌ಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್ ಮಾತನಾಡಿ ತಿಳಿಸಿದರು.

ಹಬ್ಬ ಆಚರಣೆ ವೇಳೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ಕೊಡಬೇಕು. ನಗರಸಭೆಯಿಂದ ಇದಕ್ಕೆ ಸಹಕಾರ ನೀಡಲಾಗುವುದು ಎಂದು ನಗರಸಭೆ ಆಯುಕ್ತ ಬಸಪ್ಪ ಹೇಳಿದರು.

ಎಲ್ಲ ಗಣೇಶ ಮಂಡಳದವರು ತಮ್ಮ ಪೆಂಡಾಲ್‌ಗಳಲ್ಲಿ ಉಸುಕಿನ ಚೀಲ, ಒಂದು ಡ್ರಮ್‌ ನೀರು, ಅಗ್ನಿಶಮನ ಸಾಮಗ್ರಿಗಳನ್ನು ಇಟ್ಟುಕೊಳ್ಳಬೇಕು ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಸಲಹೆ ಮಾಡಿದರು.

ಹಬ್ಬದ ಆಚರಣೆ ವೇಳೆಯಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಕ್ರಮ ವಹಿಸಲಾಗುವುದು ಎಂದು ಅಬಕಾರಿ ಇಲಾಖೆಯ ಅಧಿಕಾರಿ ತಿಳಿಸಿದರು.

ಗಣೇಶ ಮಹಾಮಂಡಳದ ಚಂದ್ರಶೇಖರ ಪಾಟೀಲ, ಬಾಬು ವಾಲಿ ಮೊದಲಾದವರು ಇದ್ದರು. ಡಿವೈಎಸ್‍ಪಿ ಬಸವೇಶ್ವರ ಹೀರಾ, ಸಂಚಾರ ಇನ್‌ಸ್ಪೆಕ್ಟರ್‌ ಉಮೇಶ, ವಿವಿಧ ಠಾಣೆಗಳ ಪಿಎಸ್‍ಐಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.