ಬಸವಕಲ್ಯಾಣ: ಸೆಪ್ಟೆಂಬರ್ 15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಯ ಬಸವಕಲ್ಯಾಣದ ಅನುಭವ ಮಂಟಪದಿಂದ ರಾಜ್ಯದ ದಕ್ಷಿಣದ ತುದಿಯಾಗಿರುವ ಚಾಮರಾಜನಗರ ಜಿಲ್ಲೆಯವರೆಗೆ 2800 ಕಿ.ಮೀ ನಷ್ಟು ಏಕಕಾಲಕ್ಕೆ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ.
ನಗರದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಮಂಗಳವಾರ ಈ ಸಂಬಂಧ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಪೂರ್ವ ಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, `ಜಿಲ್ಲೆಯಲ್ಲಿ ಬಸವಕಲ್ಯಾಣ ತಾಲ್ಲೂಕಿನ ಗ್ರಾಮಗಳಿಂದ ಹಾದುಹೋಗಿ ಹುಮನಾಬಾದ್ ತಾಲ್ಲೂಕಿನಲ್ಲಿನ ಹಳ್ಳಿಖೇಡವರೆಗೆ 45 ಕಿ.ಮೀ ನಷ್ಟು ಮಾನವ ಸರಪಳಿ ನಿರ್ಮಿಸಲಾಗುತ್ತದೆ' ಎಂದರು.
`ಪ್ರತಿ 1 ಕಿ.ಮೀ ವರೆಗೆ 770 ಜನರ ಮತ್ತು ಶಾಲಾ ಮಕ್ಕಳ ಅಗತ್ಯವಿದೆ. ಇದೆಲ್ಲದರ ವ್ಯವಸ್ಥೆಗಾಗಿ ಒಂದೊಂದು ಕಿ.ಮೀ. ಗೆ ಒಬ್ಬರಂತೆ ಅಧಿಕಾರಿಯನ್ನು ನೇಮಿಸಲಾಗುವುದು. ಆದ್ದರಿಂದ ವಿವಿಧ ಇಲಾಖೆಯವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು' ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗಿರೀಶ ಬದೋಲೆ, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಸಲೀಂ ಪಾಷಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿಂಧು. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ, ಉಪ ವಿಭಾಗಾಧಿಕಾರಿ ಪ್ರಕಾಶ ಕುದರೆ, ತಹಶೀಲ್ದಾರ್ ರಾದ ಶಾಂತಗೌಡ ಬಿರಾದಾರ, ಶಿವಾನಂದ ಮೇತ್ರೆ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ದಿಲೀಪ ಉತ್ತಮ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.