ADVERTISEMENT

ಅಂತರರಾಷ್ಟ್ರೀಯ ಶಿಕ್ಷಣ ಸಮ್ಮೇಳನಕ್ಕೆ ಶಾಹೀನ್ ಕಾಲೇಜು ಅಣಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 13:44 IST
Last Updated 30 ನವೆಂಬರ್ 2019, 13:44 IST
ಅಂತರರಾಷ್ಟ್ರೀಯ ಶಿಕ್ಷಣ ಸಮ್ಮೇಳನಕ್ಕಾಗಿ ಬೀದರ್‌ನ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ವೇದಿಕೆ
ಅಂತರರಾಷ್ಟ್ರೀಯ ಶಿಕ್ಷಣ ಸಮ್ಮೇಳನಕ್ಕಾಗಿ ಬೀದರ್‌ನ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ವೇದಿಕೆ   

ಬೀದರ್: ಡಿ. 1 ಮತ್ತು 2 ರಂದು ನಡೆಯಲಿರುವ ಅಂತರರಾಷ್ಟ್ರೀಯ ಶಿಕ್ಷಣ ಸಮ್ಮೇಳನಕ್ಕೆ ಇಲ್ಲಿಯ ಶಹಾಪೂರ ಗೇಟ್ ಬಳಿ ಇರುವ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಅಣಿಯಾಗಿದೆ.

ಸಮ್ಮೇಳನಕ್ಕಾಗಿ ವೇದಿಕೆ, ವಿಶಾಲ ಮಂಟಪ ನಿರ್ಮಿಸಲಾಗಿದೆ. ದೇಶ, ವಿದೇಶಗಳಿಂದ ಪಾಲ್ಗೊಳ್ಳಲಿರುವ ಶಿಕ್ಷಣ ತಜ್ಞರು ಹಾಗೂ ಗಣ್ಯರ ಊಟ ಮತ್ತು ವಸತಿಗೆ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನವು ಪ್ರಚಲಿತ ಶೈಕ್ಷಣಿಕ ಬೆಳವಣಿಗೆಗಳ ಕುರಿತ ಚರ್ಚೆಗೆ ವೇದಿಕೆ ಒದಗಿಸಲಿದೆ. 21ನೇ ಶತಮಾನದ ಬೋಧನೆ ಹಾಗೂ ಕಲಿಕಾ ತಂತ್ರಗಳ ಮೇಲೂ ಬೆಳಕು ಚೆಲ್ಲಲಿದೆ.

ADVERTISEMENT

1 ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ರೆಹಮಾನ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಸಜ್ಜಾದ್ ನೊಮಾನಿ, ಮಲೇಶಿಯಾದ ಶಿಕ್ಷಣ ಇಲಾಖೆಯ ಸಲಹೆಗಾರ ಡಾ. ಹಸ್ಸಾನಿ ಮುಹಮ್ಮದ್, ಪ್ಯಾಲೆಸ್ಟೈನ್‌ನ ಡಾ. ವೇಲ್ ಅಲ್ ಭಟ್ಟರ್ಕಿ ಹಾಗೂ ದೆಹಲಿಯ ಎಸ್‌ಜಿಐನ ವ್ಯವಸ್ಥಾಪಕ ನಿರ್ದೇಶಕ ಕಲೀಮುಲ್ ಹಫೀಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಮಧ್ಯಾಹ್ನ 12ಕ್ಕೆ ನಡೆಯಲಿರುವ ಗೋಷ್ಠಿಯಲ್ಲಿ ಸಿಂಗಪೂರ ಮಾದರಿಯ 21ನೇ ಶತಮಾನದ ಬೋಧನೆ ಹಾಗೂ ಕಲಿಕೆ ತಂತ್ರಗಳ ಕುರಿತು ಸಿಂಗಾಪೂರದ ಎಜುಮ್ಯಾಟ್ರಿಕ್ಸ್ ನಿರ್ದೇಶಕರಾದ ಜಯಾ ದಾಸ್ ಹಾಗೂ ನಿರ್ಮಲಾ ಅಯದುರೈ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ ವೆಲಿಡೆಕ್ಟರಿ ಅಧಿವೇಶನ ನಡೆಯಲಿದೆ. ಡಿಸೆಂಬರ್ 2 ರಂದು ಆಧುನಿಕ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಗೋಷ್ಠಿಗಳು ಜರುಗಲಿವೆ.

ಮುಂಬೈನ ಹೋಮಿ ಬಾಬಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್‌ನ ಪ್ರೊ. ನಾಗಾರ್ಜುನ ಜಿ, ಆಸ್ಟ್ರೇಲಿಯಾದ ಗ್ಲೋಬಲ್ ಡ್ರೀಮ್ಸ್‌ನ ತರಬೇತುದಾರ ಥಾಮಸ್ ಡೆಲಾನಿ, ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದ ಶೈಕ್ಷಣಿಕ ತಂತ್ರಜ್ಞ ಮುಜಾಹಿದುಲ್ ಇಸ್ಲಾಮ್, ಮುಂಬೈನ್ ಎಸ್‍ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಪ್ರೊ. ರೀಟಾ ಸೋನಾವತ್, ಹೈದರಾಬಾದ್‌ನ ಮೌಲಾನಾ ಆಜಾದ್ ಉರ್ದು ವಿಶ್ವವಿದ್ಯಾಲಯದ ಸಂಶೋಧಕಿ ನಜ್ಮಾ ಸುಲ್ತಾನಾ, ಪ್ರೊ. ಎಂಕೆಎಂ ಜಾಫರ್, ಆಕ್ಸ್‌ಫರ್ಡ್ ಕಾನೂನು ವಿಶ್ವವಿದ್ಯಾಲಯದ ಡಿ ಫಿಲ್ ಅಭ್ಯರ್ಥಿ ಅಬ್ದುಲ್ಲಾ, ದೆಹಲಿಯ ಎನ್‌ಸಿಇಆರ್‌ಟಿಯ ತಜ್ಞರ ಸಮಿತಿಯ ಸದಸ್ಯ ಡಾ. ಮಹಮ್ಮದ್ ಸೈಯೀದುಲ್ಲಾ ಷರೀಫ್ ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಭಾರತ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಪ್ರಬಂಧ ಮಂಡನೆ ಮಾಡಲಿದ್ದಾರೆ.

ಸಮ್ಮೇಳನದಲ್ಲಿ ವರ್ಗ ಕೋಣೆಗಳಲ್ಲಿ ಎಸ್‌ಟಿ ಇಎಂ ಕಲಿಕೆ ಕಾರ್ಯಾಗಾರ, ಶಿಕ್ಷಕ ಶಿಕ್ಷಣದಲ್ಲಿ ತಂತ್ರಜ್ಞಾನ, ಶೈಕ್ಷಣಿಕ ಪ್ರಗತಿಯಲ್ಲಿ ಬುದ್ಧಿಮತ್ತೆಯ ಪರಿಣಾಮ, ಅಲ್ಪಸಂಖ್ಯಾತರ ಶಿಕ್ಷಣದ ವಿಷಯಗಳು ಹಾಗೂ ಸವಾಲುಗಳು, ಬಾಲ್ಯದ ಶಿಕ್ಷಣದ ಹೊಸ ಪರಿಕಲ್ಪನೆಗಳು, ಹೊಸ ಶಿಕ್ಷಣ ನೀತಿಯ ಒಳನೋಟಗಳು, ಮದರಸಾ ಶಿಕ್ಷಣದ ಸುಧಾರಣೆಗಳು, ಕರ್ನಾಟಕದ ಶೈಕ್ಷಣಿಕ ಮಾದರಿ, ದೆಹಲಿ ಸರ್ಕಾರದ ಮಾದರಿ ಶಾಲೆಗಳ ಕುರಿತು ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.