ADVERTISEMENT

ಬೀದರ್ | ಜೈಶ್ರೀರಾಮ್‌ ಹಾಡು: ಹಿಂದೂ–ಮುಸ್ಲಿಂ ವಿದ್ಯಾರ್ಥಿಗಳ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 29 ಮೇ 2024, 23:56 IST
Last Updated 29 ಮೇ 2024, 23:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀದರ್‌: ನಗರದ ಮೈಲೂರಿನ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ಜೈಶ್ರೀರಾಮ್‌’ ಹಾಡಿನ ವಿಚಾರವಾಗಿ ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಬುಧವಾರ ಮಾರಾಮಾರಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ವಿದ್ಯಾರ್ಥಿಗಳಾದ ನಟರಾಜ (22), ವೀರೇಂದ್ರ (22) ಗಾಯಗೊಂಡಿದ್ದು, ತಲೆ, ಮೂಗು ಸೇರಿದಂತೆ ಗುಪ್ತಾಂಗಗಳಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಘಟನೆ ಸಂಬಂಧ ಒಬ್ಬ ವಿದ್ಯಾರ್ಥಿಯನ್ನು ಬಂಧಿಸಿ, ಬಾಂಡ್‌ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ನಟರಾಜ ಅವರು ಕೊಟ್ಟಿರುವ ದೂರಿನ ಮೇರೆಗೆ ಮುಸ್ಲಿಂ ಸಮುದಾಯದ 17 ವಿದ್ಯಾರ್ಥಿಗಳು ಹಾಗೂ ಒಬ್ಬ ಅಪರಿಚಿತನ ವಿರುದ್ಧ ಗಾಂಧಿಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಘಟನೆಯಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರು ಕೊಟ್ಟಿರುವ ಪ್ರತಿ ದೂರು ಆಧರಿಸಿ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಗುರುವಾರ, ಶುಕ್ರವಾರ (ಮೇ 30, 31) ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ‘ಟೆಕ್ನೊ ಕಲ್ಚರಲ್‌ ಫೆಸ್ಟ್‌ ಇ–ಬಜ್‌’ ಕಾರ್ಯಕ್ರಮವನ್ನು ಕಾಲೇಜು ಆಡಳಿತ ಮಂಡಳಿ ರದ್ದುಗೊಳಿಸಿದೆ. ‘ಘಟನೆ ಸಂಬಂಧ ಗುರುನಾನಕ ದೇವ್‌ ಎಂಜಿನಿಯರಿಂಗ್‌ ಕಾಲೇಜಿನ ಬಳಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಎಸ್ಪಿ ಮನವಿ ಮಾಡಿದ್ದಾರೆ.

ಆಗಿದ್ದೇನು?

‘ಕಾಲೇಜು ಫೆಸ್ಟ್‌ ಅಂಗವಾಗಿ ಕಾಲೇಜಿನಲ್ಲಿ ಬುಧವಾರ ಡಿ.ಜೆ ಹಾಕಿದ ಹಾಡಿಗೆ ವಿದ್ಯಾರ್ಥಿಗಳು ಡಾನ್ಸ್‌ ತಾಲೀಮು ಮಾಡುತ್ತಿದ್ದರು. ಕೊನೆಯಲ್ಲಿ ಡಿ.ಜೆ ‘ಜೈಶ್ರೀರಾಮ್‌’ ಹಾಡು ಹಾಕಿದ್ದಾರೆ. ಅದಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಲೇಜಿನಲ್ಲಿ ಈ ರೀತಿಯ ಹಾಡುಗಳನ್ನು ಹಾಕಬಾರದು. ಬೇರೆ ಹಾಡು ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಹಿಂದೂ ವಿದ್ಯಾರ್ಥಿಗಳು ಡಿ.ಜೆ ಬೆಂಬಲಕ್ಕೆ ಹೋಗಿ, ಅದೇ ಹಾಡು ಹಾಕಿ ಎಂದಿದ್ದಾರೆ. ಈ ವೇಳೆ ಎರಡೂ ಕಡೆಯ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವಿಷಯ ತಿಳಿದು ಪೊಲೀಸರು ಅಲ್ಲಿಗೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ’ ಎಂದು ಎಸ್ಪಿ ಚನ್ನಬಸವಣ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.