ADVERTISEMENT

ಜನವಾಡ: ಗ್ರಾಪಂ ಮಟ್ಟದ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 15:29 IST
Last Updated 7 ಮಾರ್ಚ್ 2020, 15:29 IST
ಬೀದರ್ ತಾಲ್ಲೂಕಿನ ಜನವಾಡದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಜೈಶ್ರೀ ಪ್ರಕಾಶ, ಪಿಡಿಒ ಸವಿತಾ ಹಿರೇಮಠ, ಉಪಾಧ್ಯಕ್ಷ ಮಾಣಿಕರಾವ್ ನಾರಾಯಣರಾವ್ ಇದ್ದರು
ಬೀದರ್ ತಾಲ್ಲೂಕಿನ ಜನವಾಡದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಜೈಶ್ರೀ ಪ್ರಕಾಶ, ಪಿಡಿಒ ಸವಿತಾ ಹಿರೇಮಠ, ಉಪಾಧ್ಯಕ್ಷ ಮಾಣಿಕರಾವ್ ನಾರಾಯಣರಾವ್ ಇದ್ದರು   

ಜನವಾಡ: ಗ್ರಾಮ ಪಂಚಾಯಿತಿ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಬೀದರ್ ತಾಲ್ಲೂಕಿನ ಜನವಾಡದ ಪಾಂಡುರಂಗ ಮಂದಿರದಲ್ಲಿ ನಡೆಯಿತು.

ಸಭೆಯಲ್ಲಿ ಕೃಷಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಜೆಸ್ಕಾಂ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ಸಾಮಾನ್ಯ ವರ್ಗದ 2,010 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 370 ರೈತರಿಗೆ ರಿಯಾಯಿತಿ ದರದಲ್ಲಿ ಬೀಜ, ಔಷಧ, ಗೊಬ್ಬರ, ಕೂರ್ಗಿ, ನೇಗಿಲು, ಟ್ರ್ಯಾಕ್ಟರ್‌ಗಳನ್ನು ಕೊಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ADVERTISEMENT

ಜನವಾಡ ಪಂಚಾಯಿತಿಯಲ್ಲಿ ಕೇಬಲ್ ಅಳವಡಿಕೆಯ ಶೇ 25 ರಷ್ಟು ಕಾಮಗಾರಿ ಕಾರಣಾಂತರದಿಂದ ನಿಂತಿದ್ದು, ಬೇಗ ಪೂರ್ಣಗೊಳಿಸಲಾಗುವುದು. ಪಟ್ಟಣದಲ್ಲಿ ಅನಧಿಕೃತ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಎಂದು ಜೆಸ್ಕಾಂ ಸಿಬ್ಬಂದಿ ತಿಳಿಸಿದರು.

ಪಟ್ಟಣದ ಹೊರವಲಯದ ಆದರ್ಶ ಶಾಲೆಗೆ ಬೇರೆ ಊರುಗಳಿಂದ ಬರಲು ವಾಹನ ವ್ಯವಸ್ಥೆ ಮಾಡಬೇಕು ಎನ್ನುವುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಆದರ್ಶ ಶಾಲೆಯ ಮುಖ್ಯಸ್ಥರು ಹೇಳಿದರು.

ದದ್ದಾಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಎಸ್‌ಡಿಎಂಸಿ ರಚಿಸಬೇಕು. ಸಂಗನಹಳ್ಳಿ ಶಾಲೆಗೆ ಅಡುಗೆ ಕೋಣೆ ಕಟ್ಟಿಸಿಕೊಡಬೇಕು. ಜನವಾಡದ ಕನ್ನಡ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ, ಕುಡಿಯಲು ಹಾಗೂ ಶೌಚಕ್ಕೆ ನೀರಿನ ವ್ಯವಸ್ಥೆ ಮಾಡಬೇಕು. ಜನವಾಡದ ಮರಾಠಿ ಮಾಧ್ಯಮ ಶಾಲೆಯ ಆವರಣ ಸಮತಟ್ಟುಗೊಳಿಸಬೇಕು ಎಂದು ಶಿಕ್ಷಕರು ಮನವಿ ಮಾಡಿದರು.

ಒಂದು ವಾರದೊಳಗೆ ಎಲ್ಲ ಇಲಾಖೆಗಳ ಅಂಕಿ ಅಂಶಗಳ ವರದಿಯನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು. ಗೈರಾದ ಅಧಿಕಾರಿಗಳ ಕುರಿತು ಮೇಲಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಹಿರೇಮಠ ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೈಶ್ರೀ ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಾಣಿಕರಾವ್ ನಾರಾಯಣರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.