ಔರಾದ್ ಪಟ್ಟಣದಲ್ಲಿ ಕನ್ನಡ ಹೋರಾಟಗಾರ್ತಿ ಜಯದೇವಿತಾಯಿ ಲಿಗಾಡೆ ಹಾಗೂ ಫ.ಗು. ಹಳಕಟ್ಟಿ ಜಯಂತಿ ಆಚರಿಸಲಾಯಿತು
ಔರಾದ್: ‘ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ ಕನ್ನಡ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ ಅವರು ಸೊಲ್ಲಾಪುರ ಕರ್ನಾಟಕದಲ್ಲಿ ಸೇರಿಸಲು ಬಹಳ ದೊಡ್ಡ ಪ್ರಯತ್ನ ಮಾಡಿದರು. ಆದರೆ ಅವರಿಗೆ ಅಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ’ ಎಂದು ಬಸವ ಕೇಂದ್ರದ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ಹೇಳಿದರು.
ಇಲ್ಲಿಯ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಜಯದೇವಿತಾಯಿ ಲಿಗಾಡೆ ಹಾಗೂ ಫ.ಗು ಹಳಕಟ್ಟಿ ಅವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಲಿಗಾಡೆ ಅವರು ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಸಾಹಿತ್ಯ ರಚಿಸುವ ಮೂಲಕ ಸಾಮರಸ್ಯದ ಕೊಂಡಿಯಾಗಿ ಕೆಲಸ ಮಾಡಿದ್ದಾರೆ’ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಜಗನ್ನಾಥ ದೇಶಮುಖ ಮಾತನಾಡಿ, ‘ಫ.ಗು ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಸರಳ ಬದುಕು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ ಅಧ್ಯಕ್ಷತೆ ವಹಿಸಿದ್ದರು. ಸುಭಾಷ್ ಪಾರಾ, ವೀರೇಶ ಅಲ್ಮಾಜೆ, ಸಂದೀಪ ಪಾಟೀಲ್, ಕಾವ್ಯ ಅಲಮಾಜೆ, ಸಂಗೀತಾ ರೆಡ್ಡಿ, ಕಾವೇರಿ ಸ್ವಾಮಿ, ಲತಾದೇವಿ, ಮನ್ಮತ ಡೋಳೆ, ಶಿವರಾಜ ಶೆಟಕಾರ, ಅಶೋಕರೆಡ್ಡಿ ಪಿಟ್ಲೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.