ಹುಲಸೂರ: ತಾಲ್ಲೂಕಿನ ಕಾದೇಪುರ ಗ್ರಾಮದಿಂದ ಘಾಟಬೊರಳ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 2 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಶಾಲಾ ಮಕ್ಕಳು, ಸಾರ್ವಜನಿಕರು ನಿತ್ಯ ಸಂಚರಿಸಲು ಪರದಾಡುತ್ತಿದ್ದಾರೆ.
ಈ ರಸ್ತೆಯ ಮೂಲಕ ಪ್ರತಿದಿನ ನೂರಾರು ವಾಹನಗಳು, ಸಾವಿರಾರು ಜನರು ಓಡಾಡುತ್ತಾರೆ. ದ್ವಿಚಕ್ರ ವಾಹನ ಸವಾರರು ಹೊಂಡ, ಗುಂಡಿಗಳನ್ನು ತಪ್ಪಿಸಿಕೊಂಡು ಮುಂದೆ ಹೋಗಲು ಹರಸಾಹಸ ಪಡಬೇಕಿದೆ. ಸುಮಾರು ಐದಾರು ಕಿ.ಮೀ. ಇರುವ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ನೀರು ನಿಂತಿದೆ.
ಇಂತಹ ಪರಿಸ್ಥಿತಿಯಲ್ಲಿಯೇ ಜನ ಮತ್ತು ವಾಹನಗಳು ಅನಿವಾರ್ಯವಾಗಿ ಸಂಚರಿಸುವಂತಾಗಿದೆ. ಜನಸಾಮಾನ್ಯರು ಓಡಾಡುವ ಸಂದರ್ಭ, ಪಕ್ಕದಲ್ಲಿ ವಾಹನಗಳು ಹಾಯ್ದು ಹೋದರೆ ಕೆಸರು ನೀರು ಮೈಮೇಲೆ ಸಿಡಿಯುತ್ತದೆ. ಹಲವು ವರ್ಷಗಳಿಂದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಹದಗೆಟ್ಟ ಹಿನ್ನೆಲೆ ಮಕ್ಕಳು ಪ್ರತಿ ನಿತ್ಯ ಶಾಲೆಗೆ ತಡವಾಗಿ ಹೋಗಬೇಕಾಗಿದೆ.
ರಸ್ತೆ ಬದಿಯಲ್ಲಿ ಯಥೇಚ್ಛವಾಗಿ ಗಿಡಮರಗಳು ಬೆಳೆದು ನಿಂತಿವೆ. ಅರಣ್ಯ ಪ್ರದೇಶವಾಗಿರುವುದರಿಂದ ಕಾಡುಪ್ರಾಣಿಗಳ ಕಾಟವೂ ಇದೆ. ರಸ್ತೆ ಅತ್ಯಂತ ಕಿರಿದಾಗಿದ್ದು, ಎದುರಿನಿಂದ-ವಾಹನ ಬಂದರೆ ಮತ್ತೊಂದು ವಾಹನ ಸಾಗಲು ತೊಂದರೆಯಾಗಲಿದೆ. ಓವರ್ ಲೋಡ್ ಹೊತ್ತ ವಾಹನಗಳ ಸಂಚಾರದಿಂದ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ.
‘ರಸ್ತೆ ದುರಸ್ತಿ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈಗಾಗಲೇ ಹಲವು ಸಲ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಯು ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಸೇರಿದ್ದು, ದುರಸ್ತಿ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅನುದಾನ ಬಂದಿಲ್ಲ ಎಂದು ಹೇಳುತ್ತಾರೆ.
ಕಾದೇಪುರ ಗ್ರಾಮದ ಹತ್ತಿರ ರಸ್ತೆಯಲ್ಲಂತೂ ಬೃಹತ್ ಗುಂಡಿಗಳು ಬಿದ್ದಿವೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಊರಿಗೆ ಬರುವ ಜನಪ್ರತಿನಿಧಿಗಳು ನಂತರ ಈ ಕಡೆ ತಲೆ ಹಾಕುವುದೇ ಇಲ್ಲ. ರಸ್ತೆ ಪೂರ್ಣ ಹಾಳಾಗಿದ್ದರೂ ದುರಸ್ತಿ ಮಾಡಿಸುವವರಿಲ್ಲ- ಅಂಕುಶ ಕಾಂಬಳೆ ಕಾದೇಪುರ ಗ್ರಾಮಸ್ಥ
ಮುಂಬರುವ ದಿನಗಳಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟು ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು- ಶಿವರಾಜ ಪಲ್ಲರಿ, ಪ್ರಭಾರ ಎಇಇ, ಗ್ರಾಮೀಣಾಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.