
ಬೀದರ್: ‘12ನೇ ಶತಮಾನದಲ್ಲಿ ಬಸವಾದಿ ಶರಣರಿಂದ ನಡೆದ ಕಲ್ಯಾಣ ಕ್ರಾಂತಿ ಸಾಮಾನ್ಯವಾದ ಕ್ರಾಂತಿಯಲ್ಲ. ಮನುಷ್ಯ ಹೇಗೆ ಬದುಕಬೇಕು. ಜೀವನದ ಉದ್ದೇಶ ಏನೆಂಬುದು ತಿಳಿಸಿದ ಮಹತ್ತರವಾದ ಕ್ರಾಂತಿ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಬಸವ ಸೇವಾ ಪ್ರತಿಷ್ಠಾನದಿಂದ ನಗರದ ಬಸವಗಿರಿಯಲ್ಲಿ ಹಮ್ಮಿಕೊಂಡಿರುವ 24ನೇ ವಚನ ವಿಜಯೋತ್ಸವದ ಎರಡನೇ ದಿನವಾದ ಶನಿವಾರ ಯುವಶಕ್ತಿ ಸಮಾವೇಶ ಹಾಗೂ ವಿಶ್ವಕಲ್ಯಾಣ ಯುವ ಪರಿಷತ್ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಮನುಷ್ಯನ ಆಚಾರ–ವಿಚಾರ ಹೇಗಿರಬೇಕೆಂದು ಬಸವಾದಿ ಶರಣರು ಮಾರ್ಗದರ್ಶನ ಮಾಡಿದ್ದಾರೆ. ನೆಮ್ಮದಿಯ ಜೀವನಕ್ಕೆ ಅಗತ್ಯವಾದ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಕಲ್ಯಾಣದಲ್ಲಿ ನಡೆದ ವೈಚಾರಿಕ ಕ್ರಾಂತಿ ಸಾರ್ವಕಾಲಿಕವಾದುದು. ವಚನ ಸಾಹಿತ್ಯ ಅಂದು, ಇಂದು, ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು.
ಬಸವಣ್ಣನವರು ಇಡೀ ದೇಶದ ಶಿವಶರಣರನ್ನು ಅನುಭವ ಮಂಟಪಕ್ಕೆ ಕರೆತಂದಿದ್ದರು. ಅವರ ಅನುಭವದ ವಿಶ್ಲೇಷಣೆಯೇ ವಚನ ಸಾಹಿತ್ಯ. ಈ ಪ್ರಪಂಚದಲ್ಲಿ ಅನೇಕ ಮೇಧಾವಿಗಳು, ತತ್ವಜ್ಞಾನಿಗಳು ಅನೇಕ ಸಿದ್ಧಾಂತ ಪ್ರತಿಪಾದಿಸಿದ್ದಾರೆ. ಆದರೆ, ಸತ್ಯ ಶರಣರು ನುಡಿದಂತೆ ನಡೆದರು. ಆದಕಾರಣ ವಚನ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅನುಭವ ಮಂಟಪದಲ್ಲಿ ಎಲ್ಲ ಶರಣರು ಚರ್ಚಿಸಿ, ವಿಶ್ಲೇಷಣೆಗೆ ಒಳಪಡಿಸಿದ ನಂತರ ವಚನಗಳಿಗೆ ಅಂಕಿತ ಬೀಳುತ್ತಿತ್ತು ಎಂದರು.
ಅನೇಕ ರೀತಿಯ ಅನಿಷ್ಠ ಪದ್ಧತಿಗಳು, ಮೇಲು–ಕೀಳು, ಜನರ ಅಜ್ಞಾನ ಕಂಡು ಶರಣರು ಈ ಧರ್ಮ ಸ್ಥಾಪಿಸಿದರು. ಸಮಾನತೆಯ ಸಮಾಜ ಕಟ್ಟಿ, ಎಲ್ಲರನ್ನೂ ಅಪ್ಪಿಕೊಂಡರು. ವಚನ ಸಾಹಿತ್ಯಕ್ಕೆ ಶೋಷಿತರು, ಹಿಂದುಳಿದ ವರ್ಗದವರ ಕೊಡುಗೆ ಬಹಳ ದೊಡ್ಡದಿದೆ. ಹೆಣ್ಣು ಮಕ್ಕಳಿಗೂ ಅನುಭವ ಮಂಟಪದಲ್ಲಿ ಸ್ಥಾನಮಾನ ಕಲ್ಪಿಸಿದ್ದರು. ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಕಸ ಗುಡಿಸುವ ಸತ್ಯಕ್ಕ, ಉರಿಲಿಂಗಪೆದ್ದಿ ಸ್ತ್ರೀ ಕಾಳವ್ವೆ ಸೇರಿದಂತೆ ಅನೇಕ ಶರಣೆಯರು ವಚನಗಳನ್ನು ರಚಿಸಿದ್ದಾರೆ. ಎಲ್ಲರಿಗೂ ಪ್ರೇರಣೆ ಸಿಗಲೆಂಬ ಉದ್ದೇಶದಿಂದ ಸರ್ಕಾರ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸುತ್ತಿದೆ. ಎಲ್ಲರೂ ಸೇರಿ ಬಸವತತ್ವ ಎತ್ತಿ ಹಿಡಿಯುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ನೇತೃತ್ವ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ ಮಾತನಾಡಿ, ಶರಣರು ದೇಶ ಭಕ್ತರು. ಐಕ್ಯತೆಗಾಗಿ ದುಡಿದವರು. ದೇಶದ ಶಕ್ತಿಯಾಗಿರುವ ಯುವಶಕ್ತಿಯ ಸದ್ಬಳಕೆ ಅವಶ್ಯಕವಾಗಿದೆ. ಸದೃಢ ನಾಡು, ರಾಷ್ಟ್ರ ಕಟ್ಟುವಲ್ಲಿ ಸ್ವಯಂ ಪ್ರೇರಣೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಅದಕ್ಕಾಗಿಯೇ ವಿಶ್ವಕಲ್ಯಾಣ ಯುವ ಪರಿಷತ್ತು ಆರಂಭಿಸಲಾಗಿದೆ ಎಂದರು.
ಯುವಕರು ತಮ್ಮ ಬದುಕಿನಲ್ಲಿ ಶಿಸ್ತು, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ, ದೃಢ ನಂಬಿಕೆ, ಶ್ರದ್ದಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಆದರ್ಶ ನಾಗರಿಕರರಾಗಲು ಸಾಧ್ಯ ಎಂದು ಹೇಳಿದರು.
ಇಸ್ರೋ ಉಪನಿರ್ದೇಶಕಿ ಕೆ.ಎಲ್.ಶಿವಾನಿ ಅವರಿಗೆ ‘ಶರಣ ವಿಜ್ಞಾನಿ’ ಪುರಸ್ಕಾರ ಪ್ರದಾನ ಮಾಡಲಾಯಿತು. ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಭೌತಶಾಸ್ತ್ರದ ನಿವೃತ್ತ ಉಪನ್ಯಾಸಕ ಎಂ.ಎಸ್. ಜೋಗದ, ಸೆಜಲಾ ಬಸವಕುಮಾರ ಸುಲಗುಂಟೆ, ಶಂಕರ ದೇವನೂರು, ಬಸವರಾಜ ಭತಮುರ್ಗೆ, ಶಿವರಾಜ ನರಶೆಟ್ಟಿ, ರಾಮಲಿಂಗ ಬಿರಾದಾರ, ಶಿವನಾಥ ಪಾಟೀಲ, ಹಾವಗಿರಾವ ಮೈಲಾರೆ, ವಿವೇಕ ಧನ್ನೂರ, ಶೇಖರ ಬಿರಾದಾರ, ಸತೀಶ ಪಾಟೀಲ ಇತರರಿದ್ದರು. ಆಕಾಶ ಮೊಳಕೇರಿ ವಚನ ಗಾಯನ ಮಾಡಿದರು. ವೈಷ್ಣವಿ ಪಾಟೀಲ ಸ್ವಾಗತಿಸಿದರೆ, ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು. ರೋಹಿತ್ ಜಿರೋಬೆ ವಂದಿಸಿದರು.
1008 ಮಕ್ಕಳಿಂದ ವಚನ ಪಾರಾಯಣ
ಬೀದರ್: ಬಸವಗಿರಿಯಲ್ಲಿ ಬೆಳಿಗ್ಗೆ 1008 ಮಕ್ಕಳು ಹಾಗೂ ಶರಣ– ಶರಣೆಯರಿಂದ ಸಾಮೂಹಿಕ ವಚನ ಪಾರಾಯಣ ನಡೆಯಿತು. ಗಂಗಾಂಬಿಕಾ ಅಕ್ಕ ಮಾತನಾಡಿ ಶರಣರು ವಿಶ್ವಕ್ಕೆ ನೀಡಿದ ಸವೆಯದ ಸಂಪತ್ತು ವಚನ ಸಾಹಿತ್ಯ. ವಚನಗಳು ಸತ್ಯದ ಗ್ಯಾರಂಟಿಗಳಾಗಿದ್ದು ಸುಖ ಶಾಂತಿ ನೆಮ್ಮದಿಯ ಬದುಕಿನ ಸೂತ್ರಗಳಾಗಿವೆ ಎಂದರು.
ಗುಣತೀರ್ಥವಾಡಿ ಬಸವ ಮಹಾಮನೆಯ ಬಸವಪ್ರಭು ಸ್ವಾಮೀಜಿ ಸವದತ್ತಿಯ ಬಸವದೇವರು ಡಾ. ಎಸ್.ಎಂ.ಮಾಲಿಪಾಟೀಲ ಡಾ. ಸಿ.ಎಸ್.ಪಾಟೀಲ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರಕುಮಾರ ಮಣಿಗೇರಿ ಇದ್ದರು. ಜಾಯಕಿಡ್ಸ್ ಪಬ್ಲಿಕ್ ಶಾಲೆ ಅಧ್ಯಕ್ಷೆ ಸಂಧ್ಯಾರಾಣಿ ಪಾಟೀಲ ವಚನ ಪಠಣ ಮಾಡಿ ಚಾಲನೆ ನೀಡಿದರು. ಜಯಶ್ರೀ ಸಿದ್ದು ಮಣಿಗೆ ಗುರುಪೂಜೆ ನೇರವೇರಿಸಿದರು.
ಗಣಪತಿ ಸೋಲಪುರೆ ಗುಂಡಯ್ಯ ತೀರ್ಥಾ ಸಂದೀಪಕುಮಾರ ಶೆಟಕಾರ ಮಲ್ಲಿಕಾರ್ಜುನ ವಡ್ಡನಕೇರೆ ದಿಲೀಪಕುಮಾರ ಕಮಠಾಣೆ ರಾಮಜಿ ರಾಠೋಡ ಮಾಧವರಾವ ಪ್ರವೀಣ ರಾಜಕುಮಾರ ಜಗನ್ನಾಥ ಇದಲಾಯಿ ಹಣಮಂತಪ್ಪ ಉಪ್ಪೆ ಯೋಗೇಂದ್ರ ಯದಲಾಪೂರೆ ಪ್ರಶಾಂತ ಪಾಟೀಲ ರವಿಕುಮಾರ ಕಾಮಣಿ ಸುಲೋಚನಾ ಗುದಗೆ ಶರಣಪ್ಪಾ ಬಿರಾದಾರ ಆಶಾ ಜೀರ್ಗೆ ಮಲ್ಲಮ್ಮ ಮುಗುಟೆ ಕಮಲಮ್ಮ ನೀಲಾ ಸೇರಿದಂತೆ ಇತರರಿದ್ದರು. ಡಾ. ಸುಭಾಷ ಕರ್ಪೂರ ಸಂಗಪ್ಪ ನಾವದಗೇರೆ ಬಸವರಾಜ ಚಾಂಗ್ಲೇರಾ ಮಲ್ಲಿಕಾರ್ಜುನ ಸಂಗಮಕರ ಶಿವಶರಣಪ್ಪ ವಲ್ಲೆಪುರೆ ಮಹಾದೇವ ಖಳ್ಳೂರೆ ಇವರಿಗೆ ಶರಣ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಘೋಡಂಪಳ್ಳಿ ಮಕ್ಕಳಿಂದ ವಚನ ಸಂಗೀತ ನಡೆಯಿತು.
‘ವಚನಗಳಲ್ಲಿ ಎಲ್ಲ ಧರ್ಮಗಳ ಸಾರ’
ಬೀದರ್: ವಚನ ಸಾಹಿತ್ಯ ಅರಿವು ಆಚಾರ ಅನುಭಾವದ ಮೇಲೆ ನಿಂತಿದೆ. ಎಲ್ಲ ಧರ್ಮಗಳ ಸಾರ ಬಸವಣ್ಣನವರ ದಯವೇ ಧರ್ಮದ ಮೂಲವಯ್ಯ ಎಂಬ ವಚನದಲ್ಲಿದೆ ಎಂದು ಬೆಂಗಳೂರು ಲೋಕಾಯುಕ್ತ ವಕೀಲ ಸಂತೋಷ ನಾಗರಾಳೆ ತಿಳಿಸಿದರು. ಧರ್ಮ ಚಿಂತನ ಗೋಷ್ಠಿಯಲ್ಲಿ ‘ಶರಣ ಸಂಸ್ಕೃತಿಯ ವೈಶಿಷ್ಟ್ಯ’ ಕುರಿತು ಮಾತನಾಡಿ ಭಕ್ತಿ ಕೇವಲ ಪೂಜೆಗೆ ಸಿಮೀತವಾಗಿರದೆ ಮನುಷತ್ವ ಮತ್ತು ಸಾಮಾಜಿಕ ಸಮಾನತೆಯೊಂದಿಗೆ ಬೆರೆತಿತ್ತು.
ಬಸವಣ್ಣನವರ ಭಕ್ತಿಯ ಸಾರ ಸಂಪೂರ್ಣ ಶರಣಾಗತಿ. ಭಕ್ತಿ ಎಂದರೆ ಕೇವಲ ಪೂಜೆ ಪುನಸ್ಕಾರವಲ್ಲ ಬದಲಾಗಿ ಕಾಯಕ ದಾಸೋಹ ಗುರು ಶರಣರ ಮಾರ್ಗದರ್ಶನ. ತ್ಯಾಗ ಸೇವೆ ಸರಳತೆಯಲ್ಲಿ ಭಕ್ತಿ ಕಾಣಬಹುದು ಎಂದರು. ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜ ಎಲಿಗಾರ ಉದ್ಘಾಟಿಸಿ ಶರಣ ಸಾಹಿತ್ಯ ವಿಶ್ವ ಸಾಹಿತ್ಯ ಭಾರತದಾಚೆ ಪರಿಚಯಿಸಲು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವುದು ಅತಿ ಅವಶ್ಯಕ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಧರ್ಮ ಮಹಾಸಭಾದ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ ಲಿಂಗಾಯತ ಧರ್ಮ ವಿಶಿಷ್ವವಾಗಿದ್ದು ಇದು ಸ್ವತಂತ್ರ ಧರ್ಮವಾಗಿದೆ ಎಂದರು.
ಭಾತಂಬ್ರಾ ವಿರಕ್ತ ಮಠದ ಶಿವಯೋಗೀಶ್ವರ ಸ್ವಾಮೀಜಿ ಗಂಗಾಂಬಿಕಾ ಅಕ್ಕ ಖೇರ್ಡಾದ ಶಿವಲಿಂಗ ಸ್ವಾಮೀಜಿ ಪಿಡಬ್ಲ್ಯೂಡಿ ಇಇ ಶಿವಶಂಕರ್ ಕಾಮಶೆಟ್ಟಿ ಪಿ.ಸಿದ್ದಪ್ಪ ಶಿವನಗೌಡ ಕಲ್ಲಹಂಗರಗಾ ರವೀಂದ್ರ ಶಾಬಾದಿ ಶಂಕರ ಕರಣೆ ರಾಜೇಂದ್ರ ಜೊನ್ನಿಕೇರಿ ಪ್ರಭು ವಸ್ಮತೆ ಬಸವರಾಜ ಬಾಲಿಕಿಲೆ ಇತರರಿದ್ದರು. ಮೀರಾ ಖೇಣಿ ಸ್ವಾಗತಿಸಿದರೆ ಶೈಲಜಾ ಚಳಕಾಪೂರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.