ಬೀದರ್: ‘ಬಸವ ಧರ್ಮ ಪೀಠದಿಂದ ವಿಶ್ವ ಶಾಂತಿಗಾಗಿ ಬಸವಕಲ್ಯಾಣದ ಬಸವ ಮಹಾಮನೆಯ ಆವರಣದಲ್ಲಿ ಅ.10ರಿಂದ 12ರ ವರೆಗೆ 24ನೇ ಕಲ್ಯಾಣ ಪರ್ವ ಹಮ್ಮಿಕೊಳ್ಳಲಾಗಿದೆ’ ಎಂದು ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಬಸವರಾಜ ಬುಳ್ಳಾ ತಿಳಿಸಿದರು.
ಜಗತ್ತಿನಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ, ಯುದ್ಧಗಳಿಂದ ಮಾನವ ಕುಲಕ್ಕೆ ಮಾರಕ. ಇದರಿಂದ ಮಾನವ ಕುಲ ನಾಶವಾಗುತ್ತಿದೆ. ಹೀಗಾಗಿಯೇ ಈ ಸಲ ವಿಶ್ವ ಶಾಂತಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ಎರಡು ದಿನ ವಿವಿಧ ಧಾರ್ಮಿಕ ಗೋಷ್ಠಿಗಳು ಜರುಗಲಿವೆ. ರಾಷ್ಟ್ರ ಹಾಗೂ ವಿದೇಶದ ಕೆಲ ಸಾಹಿತಿಗಳು, ವಿದ್ವಾಂಸರು ಆಗಮಿಸುತ್ತಿದ್ದು, ಅವರು ವಿಚಾರ ಮಂಡಿಸಲಿದ್ದಾರೆ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಪರ್ವ ಅಂದರೆ ಹಬ್ಬ. ಕಲ್ಯಾಣ ಪರ್ವ ಅಂದರೆ ಕಲ್ಯಾಣದಲ್ಲಿ ನಡೆಯುವ ಹಬ್ಬ. ವರ್ಣ, ವರ್ಗರಹಿತ ಸಮಾಜ ಕಟ್ಟಿ ಪ್ರತಿಯೊಬ್ಬರಿಗೆ ಲೇಸು ಬಯಸಿ ಲಿಂಗಾಯತ ಧರ್ಮ ಹುಟ್ಟು ಹಾಕಿದವರು ಬಸವಣ್ಣನವರು. ಅವರ ತತ್ವಾದರ್ಶಗಳನ್ನು ಜನಸಾಮಾನ್ಯರಿಗೆ ತಿಳಿಸಲು ಪ್ರತಿವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ಅ. 10ರಂದು ಬೆಳಿಗ್ಗೆ 10ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು.
ಮಧ್ಯಾಹ್ನ 3ಕ್ಕೆ ಮಹಿಳಾ ಗೋಷ್ಠಿ ನಡೆಯಲಿದ್ದು, ಗೀತಾ ಈಶ್ವರ ಖಂಡ್ರೆ ಉದ್ಘಾಟಿಸುವರು. ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಬಾಳೇಕುಂದ್ರಿ ಅನುಭಾವ ನೀಡುವರು. ಅ. 11ರಂದು ಬೆಳಿಗ್ಗೆ 7.30ಕ್ಕೆ ಶರಣ ವಂದನೆ ಶರಣರಿಗೆ ಶರಣಾರ್ಥಿ ಕಾರ್ಯಕ್ರಮ ನಡೆಯಲಿದೆ. 8.30ಕ್ಕೆ ಶೂನ್ಯ ಪೀಠಾರೋಹಣ ಕಾರ್ಯಕ್ರಮ, ಬೆಳಿಗ್ಗೆ 10.30ಕ್ಕೆ ಧರ್ಮಚಿಂತನ ಗೋಷ್ಠಿ ನಡೆಯಲಿದ್ದು, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸುವರು. ಚಿಂತಕ ಪ್ರೊ. ಸಿದ್ದು ಜಿ. ಯಾಪಲಪರವಿ ಅನುಭಾವ ನೀಡುವರು ಎಂದರು.
ಮಧ್ಯಾಹ್ನ 3ಕ್ಕೆ ರಾಷ್ಟ್ರೀಯ ಬಸವ ದಳದ ಸಮಾವೇಶ ನಡೆಯಲಿದ್ದು, ಸಂಸದ ಸಾಗರ್ ಖಂಡ್ರೆ ಉದ್ಘಾಟಿಸುವರು. ಸಂಜೆ 5.30ಕ್ಕೆ ಸಮಾಜ ಚಿಂತನ ಗೋಷ್ಠಿ ಜರುಗಲಿದೆ. ಸಚಿವ ಈಶ್ವರ ಬಿ. ಖಂಡ್ರೆ ಚಾಲನೆ ನೀಡುವರು. ಅ. 12ರಂದು ಬೆಳಿಗ್ಗೆ 9ಕ್ಕೆ ಕೋಟೆ ಆವರಣದಿಂದ ಬಸವಾದಿ ಶರಣರ ಭಾವಚಿತ್ರಗಳ ಮೆರವಣಿಗೆ ನಡೆಯಲಿದ್ದು, ಮಾಜಿಸಚಿವ ಪಿ.ಜಿ.ಆರ್. ಸಿಂಧ್ಯಾ ಚಾಲನೆ ನೀಡುವರು. ಇದೇ ವೇಳೆ ಉಚಿತ ಹೃದಯ ರೋಗ ಮತ್ತು ದಂತ ರೋಗ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸಮಿತಿ ಉಪಾಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪೂರ ಮಾತನಾಡಿ, ಈ ಸಲ ತೆಲಂಗಾಣ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗಿದೆ. ಅಲ್ಲಿಂದಲೂ ಹೆಚ್ಚಿನ ಬಸವ ಭಕ್ತರು ಆಗಮಿಸಲಿದ್ದಾರೆ. ಎಲ್ಲರಿಗೂ ಮೂರು ದಿನ ವಸತಿ, ಉಪಾಹಾರ, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಕಂಟೆಪ್ಪ ಗಂದಿಗುಡೆ, ಪ್ರಧಾನ ಕಾರ್ಯದರ್ಶಿ ಶಿವರಾಜ ನರಶೆಟ್ಟಿ, ದಾಸೋಹ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಪ್ರಮುಖರಾದ ಸಂಜೀವಕುಮಾರ ಪಾಟೀಲ, ವಿಲಾಸ ಪಾಟೀಲ, ಯೋಗೇಶ ಸಿರಿಗೇರೆ, ವೀರಶೆಟ್ಟಿ ಪಾಟೀಲ, ಪಂಚಾಕ್ಷರಿ ಇದ್ದರು.
‘ಜಗಳವಿರುವುದು ವೀರಶೈವ ಪದಕ್ಕಾಗಿ’
‘ವೀರಶೈವ ಒಂದು ಉಪಪಂಗಡ. ಲಿಂಗಾಯತ ಧರ್ಮದಲ್ಲಿ ಒಟ್ಟು 93 ಉಪಪಂಗಡಳಿವೆ. ಅದರಲ್ಲಿ ವೀರಶೈವ ಕೂಡ ಒಂದು. ಈ ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗೆ ವೀರಶೈವ ಪದ ಕೂಡ ಸೇರಿಸಿ ಕಳಿಸಿದ್ದಾಗ ತಿರಸ್ಕೃತಗೊಂಡಿತ್ತು. ವೀರಶೈವ ಲಿಂಗಾಯತ ಧರ್ಮವೇ ಅಲ್ಲ ಅದನ್ನು ಒಡೆಯುವ ಪ್ರಶ್ನೆಯೇ ಇಲ್ಲ. ಜಗಳವಿರುವುದು ವೀರಶೈವ ಪದಕ್ಕಾಗಿ ಹೊರತು ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಅಲ್ಲ’ ಎಂದು ಬಸವರಾಜ ಬುಳ್ಳಾ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಆದಿ ಅನಾದಿ ದ್ವಾಪರ ಯುಗದಲ್ಲಿ ಪಂಚಾಚಾರ್ಯರು ಇದ್ದರೂ ಎಂದು ಹೇಳುತ್ತಾರೆ. ಕಲ್ಲಿನಲ್ಲಿ ರೇಣುಕಾಚಾರ್ಯರು ಹುಟ್ಟಿದ್ದಾರೆಂದು ಹೇಳುತ್ತಾರೆ. ಅದು ಅವರ ನಂಬಿಕೆ. ಅದರ ಬಗ್ಗೆ ನಾವೇನೂ ಟೀಕೆ ಮಾಡಲ್ಲ. ಆದರೆ ಸಚಿವ ಸಂಪುಟದಲ್ಲಿ ಮೂರು ಸಲ ಚರ್ಚೆ ನಡೆದು ಅಂತಿಮವಾಗಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಆಗಲೇ ಸಚಿವ ಈಶ್ವರ ಬಿ. ಖಂಡ್ರೆ ಅವರು ಆಕ್ಷೇಪ ಮಾಡಬೇಕಿತ್ತು. ಆದರೆ ಆಗ ಅವರು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ಮಾತೆ ಮಹಾದೇವಿ ಚಾಲನೆ
‘24ನೇ ಕಲ್ಯಾಣ ಪರ್ವ 2002ನೇ ಇಸ್ವಿಯಲ್ಲಿ ಬಸವಧರ್ಮ ಪೀಠದ ಅಂದಿನ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಚಾಲನೆ ಕೊಟ್ಟಿದ್ದರು. ಅಂದಿನಿಂದ ಇಂದಿನ ವರೆಗೆ ಸತತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಬಸವಾದಿ ಶರಣರ ತತ್ವ ಪ್ರಸಾರ ಈ ಕಾರ್ಯಕ್ರಮದ ಮುಖ್ಯ ಉದ್ದೇಶ’ ಎಂದು ಬಸವಕಲ್ಯಾಣ ಅಲ್ಲಮಪ್ರಭು ಪೀಠದ ಪೀಠಾಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು. ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ನೇತೃತ್ವದಲ್ಲಿ ಮೂರು ದಿನ ಕಾರ್ಯಕ್ರಮ ನಡೆಯಲಿವೆ. ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳ ಮಠಾಧೀಶರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.