ADVERTISEMENT

ಬೀದರ್ | ತಡೆಗೋಡೆ ಇಲ್ಲದ ಸೇತುವೆ: ಭಯದಲ್ಲೇ ಸಂಚಾರ

ಚುನಾಯಿತ ಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:08 IST
Last Updated 9 ಆಗಸ್ಟ್ 2025, 6:08 IST
ಕಮಲನಗರ-ಔರಾದ್‌ ಮುಖ್ಯ ರಸ್ತೆಯಲ್ಲಿರುವ ಖತಗಾಂವ ಕ್ರಾಸ್‌ ಬಳಿಯ ಸೇತುವೆಗೆ ತಡೆಗೋಡೆ ಇಲ್ಲದಿರುವುದು
ಕಮಲನಗರ-ಔರಾದ್‌ ಮುಖ್ಯ ರಸ್ತೆಯಲ್ಲಿರುವ ಖತಗಾಂವ ಕ್ರಾಸ್‌ ಬಳಿಯ ಸೇತುವೆಗೆ ತಡೆಗೋಡೆ ಇಲ್ಲದಿರುವುದು   

ಕಮಲನಗರ: ಕಮಲನಗರ-ಔರಾದ್‌ ಮುಖ್ಯ ರಸ್ತೆಯಲ್ಲಿರುವ ಖತಗಾಂವ ಕ್ರಾಸ್ ಬಳಿಯ ಹಳ್ಳದ ಸೇತುವೆಗೆ ತಡೆಗೋಡೆಯೇ ಇಲ್ಲ. ಇದರಿಂದ ವಾಹನ ಸವಾರರು ನಿತ್ಯ ಜೀವ ಭಯದಲ್ಲೇ ಸಂಚರಿಸುವಂತಾಗಿದೆ.

ಕಮಲನಗರ ತಾಲ್ಲೂಕು ಕೇಂದ್ರದ ಕಚೇರಿ, ಶಾಲಾ-ಕಾಲೇಜು ಸೇರಿ ಇನ್ನಿತರ ಕೆಲಸ ಕಾರ್ಯಗಳಿಗೆ ಈ ಭಾಗದ ಜನರು ನಿತ್ಯ ಇದೇ ಮಾರ್ಗವಾಗಿ ಹೋಗುತ್ತಾರೆ. ಅಪಾಯ ಸಂಭವಿಸಿದರೆ ಯಾರು ಹೊಣೆ? ತಡೆಗೋಡೆ ನಿರ್ಮಿಸಲು ಅಧಿಕಾರಿಗಳು ಯಾಕೆ ಆಸಕ್ತಿ ತೋರುತ್ತಿಲ್ಲ ಎಂಬುದು ಸವಾರರ ಪ್ರಶ್ನೆ.

ಸೇತುವೆ ಇಳಿಜಾರು ರಸ್ತೆಯಲ್ಲಿ ಇರುವ ಕಾರಣ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ದ್ವಿಚಕ್ರ ವಾಹನ ಸವಾರರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ಕೂಡ ಅಪಘಾತಕ್ಕೀಡಾದ ಉದಾಹರಣೆಗಳಿವೆ.

ADVERTISEMENT

ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆಗೆ ತಡೆಗೋಡೆ ನಿರ್ಮಿಸಬೇಕು. ಸೇತುವೆ ಎತ್ತರ ಹೆಚ್ಚಿಸಬೇಕು ಎಂದು ಪ್ರಯಾಣಿಕರಾದ ಜಗನ್ನಾಥ ಪರಿಹಾರ, ಸಂಗಮೇಶ ಧರಣೆ, ಮಹೇಶ ಪಾಟೀಲ್, ದಿಗಂಬರ ಬಿರಾದಾರ, ಶೈಲೇಶ ಪೇನೆ, ಸಂಗಮೇಶ ವಲ್ಲೂರೆ ಒತ್ತಾಯಿಸಿದ್ದಾರೆ.

ಕಮಲನಗರ ತಾಲ್ಲೂಕು ಕೇಂದ್ರಕ್ಕೆ ನಿತ್ಯ ನೂರಾರು ಜನ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಕೂಡಲೇ ಅಧಿಕಾರಿಗಳು ಗಮನಹರಿಸಿ ಸೇತುವೆಗೆ ತಡೆಗೋಡೆ ನಿರ್ಮಿಸಬೇಕು
ಮಂಜುನಾಥ ಸ್ವಾಮಿ ಕರವೇ ಅಧ್ಯಕ್ಷ ಕಮಲನಗರ
ಇದು ಕಿರು ಸೇತುವೆ. ಈ ಸೇತುವೆಯ ಎತ್ತರ ಹೆಚ್ಚಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು
ಶ್ರೀರಂಗ ಪರಿಹಾರ ತಾ.ಪಂ. ಮಾಜಿ ಅಧ್ಯಕ್ಷ

ಸಂಪರ್ಕ ಕಡಿತ ಸಮಸ್ಯೆ:

ಸೇತುವೆ ಇಳಿಜಾರಿನಲ್ಲಿದ್ದು ಮಳೆಗಾಲದಲ್ಲಿ ಸ್ವಲ್ಪ ಮಳೆ ಬಿದ್ದರೂ ಸೇತುವೆ ಮೇಲಿಂದ ನೀರು ಹರಿದು ಕಮಲನಗರ-ಔರಾದ್‌(ಬಾ) ಮುಖ್ಯರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ದಾಬಕಾ ಡೋಣಗಾಂವ ತೋರಣಾ ಮುಧೋಳ ಮುರ್ಕಿ ಹಾಗೂ ಇನ್ನಿತರ ಗ್ರಾಮಗಳ ಸಾರ್ವಜನಿಕರು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.