ADVERTISEMENT

ಕಮಲನಗರ ಅಭಿವೃದ್ಧಿಗೆ ₹20 ಕೋಟಿ: ಶಾಸಕ ಪ್ರಭು.ಬಿ.ಚವಾಣ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 8:07 IST
Last Updated 28 ಡಿಸೆಂಬರ್ 2025, 8:07 IST
ಕಮಲನಗರ ಪಟ್ಟಣದಲ್ಲಿ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ಸಾರ್ವಜನಿಕರ ಸಮಸ್ಯೆ ಆಲಿಸಿದರು
ಕಮಲನಗರ ಪಟ್ಟಣದಲ್ಲಿ ನಡೆದ ಗ್ರಾಮ ಸಂಚಾರ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ಸಾರ್ವಜನಿಕರ ಸಮಸ್ಯೆ ಆಲಿಸಿದರು   

ಕಮಲನಗರ: ‘ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ. ಪ್ರತಿವರ್ಷ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರ ಜತೆಗೆ ವಿವಿಧ ಅಭಿವೃದ್ದಿ ಕೆಲಸಗಳನ್ನು ನಿರಂತರ ಕೈಗೊಳ್ಳುತ್ತಿದೆ. ಈ ಬಾರಿಯೂ ಸುಮಾರು ₹20 ಕೋಟಿ ಅನುದಾನ ತಂದಿದ್ದೇನೆ’ ಎಂದು ಶಾಸಕ ಪ್ರಭು.ಬಿ.ಚವಾಣ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಗ್ರಾಮ ಸಂಚಾರ ನಡೆಸಿ ಅವರು ಮಾತನಾಡಿದರು.

‘₹20 ಕೋಟಿ ಅನುದಾನ ಒದಗಿಸಿದ್ದೇನೆ. ಇದರಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸುಮಾರು ₹2.5 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

ಕಮಲನಗರದಿಂದ ಮುರುಗ(ಕೆ) ವರೆಗೆ ₹1.56 ಕೋಟಿ ವೆಚ್ಚದ ರಸ್ತೆ, ₹99 ಲಕ್ಷ ವೆಚ್ಚದ ಹರಳಯ್ಯ ಸಮುದಾಯ ಭವನ, ವಿಠಲ ಮಂದಿರದ ಬಳಿ ₹20 ಲಕ್ಷ ವೆಚ್ಚದ ಸಮುದಾಯ ಭವನ, ಬಸವೇಶ್ವರ ವೃತ್ತದಿಂದ ಚಿಕಮುರ್ಗೆ ಮನೆವರೆಗೆ, ಮಲ್ಲು ನಾವಡೆ ಮನೆಯಿಂದ ನಾಗೋಬಾ ಮಂದಿರ, ಬಜಾಜ ಶೋರೂಮ್‍ನಿಂದ ಬಾಲಾಜಿ ಬಿರಾದಾರ ಮನೆ, ₹20 ಲಕ್ಷ ಮೊತ್ತದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು, ಸರ್ಕಾರಿ ಶಾಲೆಯಲ್ಲಿ ಬಾಲಕಿಯರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕವಾಗಿ ₹5.20 ಲಕ್ಷ ವೆಚ್ಚದ ಶೌಚಾಲಯಗಳು, ಬಾಲಕಿಯರ ವಸತಿ ನಿಲಯ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ₹3.50 ಲಕ್ಷದ ಎರಡು ಹೈಮಾಸ್ಟ್ ವಿದ್ಯುತ್ ದೀಪಗಳು ಸೇರಿದಂತೆ ಮತ್ತಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ಡೋಣಗಾಂವ ವಾಯಾ ರಂಡ್ಯಾಳದಿಂದ ಹಕ್ಯಾಳವರೆಗೆ ₹2.2 ಕೋಟಿ ವೆಚ್ಚದ ರಸ್ತೆ, ಹಕ್ಯಾಳನಲ್ಲಿ ₹50 ಲಕ್ಷದ ಶಾಲಾ ಕಟ್ಟಡ ಕಾಮಗಾರಿ, ₹3.5 ಲಕ್ಷದ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿ, ₹10 ಲಕ್ಷದ ಸಮುದಾಯ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಚಾಲ್ತಿಯಲ್ಲಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಗುಣಮಟ್ಟದ ವಿಷಯದಲ್ಲಿ ಯಾವುದೇ ರೀತಿಯ ದೂರುಗಳು ಬಂದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಡೋಣಗಾಂವ ವಾಡಿ, ರಂಡ್ಯಾಳ, ಹಕ್ಯಾಳ, ಖತಗಾಂವ, ಮದನೂರ, ಕಮಲನಗರ, ಮುರುಗ(ಕೆ) ಹಾಗೂ ಬಾಲೂರ(ಕೆ) ಗ್ರಾಮಗಳಲ್ಲಿ ಗ್ರಾಮ ಸಂಚಾರ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ವಿದ್ಯುತ್, ಕುಡಿಯುವ ನೀರು, ಚರಂಡಿ ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಸೂಚಿಸಲಾಯಿತು.

ಗ್ರಾಮ ಸಂಚಾರದ ಸಂದರ್ಭದಲ್ಲಿ ಶಾಸಕರು ವಿವಿಧ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಶಿಕ್ಷಣ ವ್ಯವಸ್ಥೆಯನ್ನು ಪರಿಶೀಲಿಸಿದರು. ಡೋಣಗಾಂವ ವಾಡಿ, ರಂಡ್ಯಾಳ ಹಾಗೂ ಮತ್ತಿತರೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವುದನ್ನು ಕಂಡು ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ಅಗತ್ಯವಿರುವ ಕಡೆಗಳಲ್ಲಿ ವರ್ಗಾವಣೆ ಮಾಡಿ ಇಲ್ಲವೇ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಿ ಎಂದು ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾ.ಪಂ ಇಒ ಹಣಮಂತರಾಯ, ಟಿಎಚ್‌ಒ ಡಾ.ಗಾಯತ್ರಿ, ಲೋಕೋಪಯೋಗಿ ಉಲಾಖೆ ಎಇಇ ಪ್ರೇಮಸಾಗರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಗಳ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.