ADVERTISEMENT

ಕಮಲನಗರ: ಬಿತ್ತನೆಗೆ ಸಜ್ಜಾಗು‌ತ್ತಿರುವ ರೈತರು

ಕೃಷಿ ಇಲಾಖೆಯಿಂದ ಬೀಜ, ಗೊಬ್ಬರ ದಾಸ್ತಾನು

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 5:45 IST
Last Updated 2 ಜೂನ್ 2025, 5:45 IST
ಕಮಲನಗರ ತಾಲ್ಲೂಕಿನ ಖತಗಾಂವ ಗ್ರಾಮದ ಹೊಲವೊಂದರಲ್ಲಿ ರೈತ ಎತ್ತುಗಳಿಂದ ಹೊಲ ಹದ ಮಾಡುತ್ತಿರುವುದು
ಕಮಲನಗರ ತಾಲ್ಲೂಕಿನ ಖತಗಾಂವ ಗ್ರಾಮದ ಹೊಲವೊಂದರಲ್ಲಿ ರೈತ ಎತ್ತುಗಳಿಂದ ಹೊಲ ಹದ ಮಾಡುತ್ತಿರುವುದು   

ಕಮಲನಗರ: ತಾಲ್ಲೂಕಿನಾದ್ಯಂತ ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದ್ದು ರೈತರಲ್ಲಿ ಸಂತಸ ತಂದಿದೆ. ರೈತರು ಬಿತ್ತನೆಗಾಗಿ ತಮ್ಮ ಜಮೀನುಗಳನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಕೃಷಿ ಇಲಾಖೆಯೂ ಕೂಡ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಮಾಡಿಕೊಂಡಿದೆ.

ಕಳೆದ 15 ದಿವಸಗಳಿಂದ ಮುಂಗಾರು ಪೂರ್ವ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರಲ್ಲಿ ಸಂತಸವನ್ನುಂಟು ಮಾಡಿದೆ.ಈ ಬಾರಿ ಉತ್ತಮ ಮುಂಗಾರು ಮಳೆಯ ಸೂಚನೆ ಇರುವುದರಿಂದ ರೈತರು ಈಗಾಗಲೇ ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಔಷಧ ಸಿಂಪರಣೆ, ಹೊಲದಲ್ಲಿ ಕೊಟ್ಟಿಗೆ ಗೊಬ್ಬರವನ್ನು ಹಾಕಿಸಿ, ಅದರ ಫಲವತ್ತತೆ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರು ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸುತ್ತಿದ್ದಾರೆ.

ADVERTISEMENT

ಬಿತ್ತನೆ ಬೀಜ ವಿತರಣೆ: ಪ್ರಸಕ್ತ ಸಾಲಿನಲ್ಲಿ ಸೋಯಾಬಿನ್ 27,478 ಹೆಕ್ಟೇರ್, ತೊಗರಿ 10,290 ಹೆಕ್ಟೇರ್, ಉದ್ದು 710 ಹೆಕ್ಟೇರ್‌, ಹೆಸರು 690 ಹೆಕ್ಟೇರ್ ಸೇರಿ ಒಟ್ಟು 39,938 ಹೆಕ್ಟೇರ್ ಪ್ರದೇಶ ಬಿತ್ತನೆ ಕೈಗೊಳ್ಳುವ ಗುರಿ ಹೊಂದಲಾಗಿದೆ. ಕಮಲನಗರ ತಾಲ್ಲೂಕಿಗೆ 10,972 ಕ್ವಿಂಟಲ್‌ ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ 4,851 ಕ್ವಿಂಟಲ್‌ ಬಿತ್ತನೆ ಬೀಜಗಳ ಸರಬರಾಜು ಆಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಕೆಲವು ಸಲಹೆಗಳು: 75 ರಿಂದ 80ಮಿ.ಮೀಟರ್ ಮಳೆ ಆದ ನಂತರ ಸೋಯಾ ಅವರೆ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಸೋಯಾ ಬೀಜಗಳನ್ನು 4ರಿಂದ 5 ಸೆ.ಮೀ. ಆಳದಲ್ಲಿ ಬಿತ್ತನೆ ಮಾಡಬೇಕು. ಈ ಬೆಳೆಯು ಎಣ್ಣೆಕಾಳು ಬೆಳೆ ಆಗಿದ್ದು, ಡಿಎಪಿ ಬದಲಾಗಿ ಎನ್.ಪಿ.ಕೆ ಕಾಂಪ್ಲೆಕ್ಸ್ ಗೊಬ್ಬರವನ್ನು ಬಳಸಬೇಕು. ಮುಂಗಾರು ಹಂಗಾಮು ನಿಗದಿತ ಸಮಯಕ್ಕೆ ಪ್ರಾರಂಭವಾಗುವುದರಿಂದ ರೈತರು ಬಿತ್ತನೆ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಇಲಾಖೆ ಹೇಳಿದೆ.

ಕಮಲನಗರ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ 13 ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ
ಧುಳಪ್ಪ ಹೊಸಾಳೆ ಸಹಾಯಕ ಕೃಷಿ ನಿರ್ದೇಶಕ ಔರಾದ್
ರೈತರು ಜೂನ್ ತಿಂಗಳಿನಲ್ಲಿ ಮಾನ್ಸೂನ್ ಮಳೆ ಬಿದ್ದ ನಂತರವೇ ಉದ್ದು ಹೆಸರು ಸೋಯಾ ಅವರೆ ಇನ್ನಿತರ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಬೇಕು.
ಪ್ರವೀಣ ಕುಲಕರ್ಣಿ ತಾಲೂಕಾಧ್ಯಕ್ಷ ರೈತ ಸಂಘ ಕಮಲನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.