
ಕಮಲನಗರ: ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆರಿಸಲು ಸಚಿವ ಸಂಪುಟದಿಂದ ಗುರುವಾರ ಅನುಮೋದನೆ ದೊರೆತ ಹಿನ್ನೆಲೆ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಶಾಸಕ ಪ್ರಭು ಚವಾಣ್,‘ಕಮಲನಗರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ ನೀಡಿದ್ದು, ಪರಿಶ್ರಮಕ್ಕೆ ಫಲಸಿಕ್ಕಿದೆ. ಕಮಲನಗರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವೆ. ಶಾಸಕನಾದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೇನೆ. ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಉದ್ದೇಶದಿಂದ ಹೊಸ ತಾಲ್ಲೂಕು ಕೇಂದ್ರವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದಿದ್ದಾರೆ.
‘ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಪದೇ ಪದೇ ಭೇಟಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಮನವಿ ಸಲ್ಲಿಸಿದ್ದೆ. ವಿಧಾನಸಭಾ ಅಧಿವೇಶನದಲ್ಲಿ ಧ್ವನಿಎತ್ತಿದ್ದೆ. ಕೆಲ ದಿನಗಳ ಹಿಂದೆಯೇ ಮುಖ್ಯಮಂತ್ರಿ ಮತ್ತು ಸಚಿವರನ್ನು ಖುದ್ದಾಗಿ ಭೇಟಿಯಾಗಿ ಕೆಲಸ ಶೀಘ್ರ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೆ. ಮನವಿಗೆ ಸ್ಪಂದಿಸಿ ಸರ್ಕಾರ ಕಮಲನಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ನಿರ್ಣಯಿಸಿದೆ’ ಎಂದು ತಿಳಿಸಿದ್ದಾರೆ.
ಕಮಲನಗರ ಗ್ರಾಮ ಪಂಚಾಯಿತಿಯನ್ನು ಕಾಂಗ್ರೆಸ್ ಸರ್ಕಾರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿದ್ದು ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಭೀಮಸೇನರಾವ ಶಿಂಧೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು‘ಕಾಂಗ್ರೆಸ್ ಸರ್ಕಾರ ಮಾಡಿರುವ ಕೆಲಸಗಳು ನಾನೇ ಮಾಡುತ್ತಿದ್ದೇನೆ ಎಂದು ಶಾಸಕ ಪ್ರಭು ಚವ್ಹಾಣ ಅವರು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರ ಕ್ಷೇತ್ರದಲ್ಲಿ ಮಾಡದ ಕೆಲಸಗಳು ನಮ್ಮ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಔರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡಿದ್ದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ ಅವರಿಂದ ಹೊರತು ಶಾಸಕ ಪ್ರಭು ಚವ್ಹಾಣ ಅವರಿಂದ ಅಲ್ಲ’ ಎಂದಿದ್ದಾರೆ. ಕಮಲನಗರ ಪಟ್ಟಣ ಪಂಚಾಯಿತಿ ಆಗುತ್ತಿರುವ ವಿಷಯ ತಿಳಿದ ಶಾಸಕ ಪ್ರಭು ಚವ್ಹಾಣ ಪಟ್ಟಣ ಪಂಚಾಯಿತಿ ಶ್ರೇಯಸ್ಸು ಪಡೆಯಲು ಮಾಧ್ಯಮದಲ್ಲಿ ಪ್ರಚಾರ ಪಡೆಯುವುದು ಸರಿಯಲ್ಲ. ಕ್ಷೇತ್ರದ ಜನರ ಸಮಸ್ಯೆಗಳು ಅಗತ್ಯ ಅಭಿವೃದ್ಧಿಯ ಬಗ್ಗೆ ನಾನಾ ಯೋಜನೆಗಳು ರೂಪಿಸಿಕೊಂಡು ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಕೆಲಸಗಳು ಮಾಡುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.