ಕಮಲನಗರ: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಸೇತುವೆಗಳು ಜಲಾವೃತ್ತಗೊಂಡಿದ್ದು, ರೈತರ ಅಪಾರ ಪ್ರಮಾಣದ ಬೆಳೆಗಳು ಹಾನಿಗೀಡಾಗಿವೆ.
ಕಳೆದ ಒಂದು ವಾರದ ಹಿಂದೆ ಭಾರಿ ಮಳೆಯಿಂದ ಹಲವು ಕಡೆ ಸೇತುವೆ ಕೊಚ್ಚಿಕೊಂಡು ಹೋಗಿದ್ದವು. ರೈತರ ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಬಳಿಕ ಈಗಷ್ಟೆ ಮಳೆ ಬಿಡುವು ಕೊಟ್ಟಿತ್ತು. ಆದರೆ ಮತ್ತೆ ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ರೈತರ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆ ನೀರು ಪಾಲಾಗಿದೆ.
ಹಾಲಹಳ್ಳಿ-ಬೆಡಕುಂದಾ ಗ್ರಾಮದ ಮಧ್ಯದಲ್ಲಿ ಇರುವ ಹಳ್ಳಕ್ಕೆ ಪ್ರವಾಹ ಬಂದು ಹೊಲಗಳಿಗೆ ನೀರು ನುಗ್ಗಿ ಹೆಸರು, ಉದ್ದು, ಸೋಯಾಬಿನ್, ತೊಗರಿ ಬೆಳೆಗಳಿಗೆ ಹಾನಿಯಾಗಿದೆ. ಬೆಡಕುಂದಾ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಸೇತುವೆಗಳ ಸಂಪರ್ಕ ಕಡಿತ:
ಕಮಲನಗರ-ಸೋನಾಳ ಮಧ್ಯದ ದೇವನಾಲಾ, ಕಮಲನಗರ-ಔರಾದ ಸಂಪರ್ಕಿಸುವ ಖತಗಾಂವ ಕ್ರಾಸ್ ಬಳಿಯ ಸೇತುವೆ, ತೋರಣಾ-ಮುಧೋಳ(ಬಿ) ಸಂಪರ್ಕ ಸೇತುವೆ, ಹಾಲಹಳ್ಳಿ-ಬೆಡಕುಂದಾ ಸೇತುವೆ, ಬಸನಾಳ-ಕೋರಿಯಾಳ ಸೇತುವೆ, ಠಾಣಾಕುಶನೂರ-ನಿಡೋದಾ ಸೇತುವೆ, ಸಂಗಮ -ಠಾಣಾಕುಶನೂರ್ ಸೇತುವೆ, ಚಿಮ್ಮೇಗಾಂವ-ಚಿರಕಿ ತಾಂಡಾ, ನಂದಿ ಬಿಜಲಗಾಂವ-ಉದಗೀರ್ ಮತ್ತು ಚೊಂಡಿಮುಖೇಡ್-ಉದಗೀರ್-ದೇಗಲೂರ್ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಇರುವ ಸೇತುವೆಗಳು ಜಲಾವೃತಗೊಂಡಿವೆ. ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದೆ. ತಾಲ್ಲೂಕು ಸೇರಿದಂತೆ ಬೇರೆಡೆಗೆ ತೆರಳುವ ಹಲವು ಸಂಪರ್ಕ ಸೇತುವೆಗಳಿಗೆ ಪ್ರವಾಹ ನೀರಿನಿಂದ ಸಂಪರ್ಕ ಕಡಿತಗೊಂಡಿದೆ. ಕಮಲನಗರ-ಸಂಗಮ್ ಕ್ರಾಸ್ ಮೂಲಕ ಭಾಲ್ಕಿ, ಬೀದರ್ ಪಟ್ಟಣಕ್ಕೆ ತೆರಳುವ ಏಕೈಕ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿವೆ.
ಕೊಚ್ಚಿ ಹೋದ ಸೇತುವೆಗಳು:
ಭಾರಿ ಮಳೆಗೆ ಚಿಮ್ಮೆಗಾಂವ ಗ್ರಾಮದಿಂದ ಚಿರಕಿತಾಂಡಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದ ಸೇತುವೆ ಹಾಗೂ ಹಾಲಹಳ್ಳಿ-ಬೆಡಕುಂದಾ ಸಂಪರ್ಕ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ರೈತರ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆ ಹಾಗೂ ಮಣ್ಣು ಕೊಚ್ಚಿಕೊಂಡು ಹೋಗಿದೆ ಎಂದು ಚಿಮ್ಮೆಗಾಂವ ಗ್ರಾಮಸ್ಥ ಅನೀಲಕುಮಾರ ಬಿರಾದಾರ ‘ಪ್ರಜಾವಾಣಿಗೆ’ ತಿಳಿಸಿದ್ದಾರೆ.
ಮನೆಗೋಡೆ ಕುಸಿತ: ತಾಲ್ಲೂಕಿನ ಖತಗಾಂವ ಗ್ರಾಮದ ಮಲ್ಲಿಕಾರ್ಜುನ ಬಸಪ್ಪ ಧರಣೆ ಅವರ ಮನೆ ಗೋಡೆ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.