
ಕಮಲನಗರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು 30 ಹಾಸಿಗೆಯಿಂದ 50 ಹಾಸಿಗೆಗಳಿಗೆ ಉನ್ನತೀಕರಿಸುವ ಕಾಮಗಾರಿಗೆ ಶನಿವಾರ ಶಾಸಕ ಪ್ರಭು ಬಿ.ಚವ್ಹಾಣ ಶಂಕು ಸ್ಥಾಪನೆ ನೆರವೇರಿಸಿದರು.
ಕಮಲನಗರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸದ್ಯ 30 ಹಾಸಿಗೆಗಳಿದ್ದು, 50 ಹಾಸಿಗೆಗಳಿಗೆ ಮೇಲ್ದರ್ಜೇಗೇರಿಸುವ ₹ 6.45 ಕೋಟಿ ಮೊತ್ತದ ಕಾಮಗಾರಿಗೆ ಶನಿವಾರ ಶಾಸಕ ಪ್ರಭು ಬಿ. ಚವಾಣ್ ಶಂಕುಸ್ಥಾಪನೆ ನೆರವೇರಿಸಿದರು.
ತಾಲ್ಲೂಕಿನ ಜನರಿಗೆ ಸೂಕ್ತ ರೀತಿಯಲ್ಲಿ ಆರೋಗ್ಯ ಸೇವೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಬೇಡಿಕೆಗೆ ತಕ್ಕಂತೆ ಅಗತ್ಯ ಪೂರೈಸುವ ಕೆಲಸ ಮಾಡುತ್ತಿದ್ದೇನೆ. ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಅದಕ್ಕಾಗಿ ₹6.45 ಕೋಟಿ ಅನುದಾನದ ಕಾಮಗಾರಿ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಆಸ್ಪತ್ರೆ ಅಭಿವೃದ್ಧಿಗೆ ಅಗತ್ಯ ಸೌಕರ್ಯ ಒದಗಿಸಲು ಪ್ರಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ’ ಎಂದು ಹೇಳಿದರು.
‘ಬಡ ಜನರಿಗೆ ಆರೋಗ್ಯ ಸೇವೆ ಸಿಗಬೇಕೆಂಬ ಉದ್ದೇಶದಿಂದ ಆಸ್ಪತ್ರೆಯನ್ನು ಉನ್ನತೀಕರಿಸಲಾಗುತ್ತಿದೆ. ಕಾಮಗಾರಿ ಗುಣಮಟ್ಟದಿಂದ ಮಾಡಬೇಕು. ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸಬೇಕು. ಕಾಮಗಾರಿ ಬಗ್ಗೆ ದೂರು ಬಂದರೆ ಸುಮ್ಮನಿರುವುದಿಲ್ಲ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೂಡ ತಮ್ಮ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕೆಲಸದ ಮೇಲೆ ನಿಗಾ ವಹಿಸಬೇಕು. ಅಂದಾಜು ಪಟ್ಟಿಯಲ್ಲಿರುವಂತೆ ಕೆಲಸವಾಗುವಂತೆ ನೋಡಿಕೊಳ್ಳಬೇಕು. ಕೆಲಸ ಅಸಮರ್ಪಕವಾಗಿ ನಡೆಯುತ್ತಿದೆ ಎಂದು ಅನ್ನಿಸಿದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ವಾರ್ಡ್‍ಗಳಲ್ಲಿ ಸಂಚರಿಸಿ, ಆಸ್ಪತ್ರೆಯ ವ್ಯವಸ್ಥೆ ವೀಕ್ಷಿಸಿದರು. ಆಸ್ಪತ್ರೆಗೆ ಬಂದಿದ್ದ ರೋಗಿಗಳ ಕುಂದುಕೊರತೆ ಆಲಿಸಿದರು. ಎಲ್ಲ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿದ್ದಾರಾ? ಔಷಧ ಉಚಿತವಾಗಿ ನೀಡುತ್ತಿದ್ದಾರಾ? ಆಸ್ಪತ್ರೆಯ ಸೇವೆಗಳು ಹೇಗಿವೆ ಎಂದು ಪ್ರಶ್ನಿಸಿ, ಮಾಹಿತಿ ಪಡೆದರು.
ರಾತ್ರಿ ವೇಳೆ ವೈದ್ಯರು ಲಭ್ಯವಿಲ್ಲ ಎಂದು ಸಾರ್ವಜನಿಕರು ಗಮನಕ್ಕೆ ತಂದಾಗ ತೀವ್ರ ಅಸಮಾಧಾನಗೊಂಡ ಶಾಸಕರು, ‘ಕೇಂದ್ರದಲ್ಲಿ 24 ಗಂಟೆಯೂ ವೈದ್ಯರು ಲಭ್ಯವಿರಬೇಕು. ಸಣ್ಣ ಪುಟ್ಟ ಸಮಸ್ಯೆಗಳಿಗೂ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡುವುದನ್ನು ನಿಲ್ಲಿಸಿ, ಇಲ್ಲಿಯೇ ಚಿಕಿತ್ಸೆ ಕಲ್ಪಿಸಲು ಒತ್ತು ಕೊಡಬೇಕು. ವೈದ್ಯರ ನಿರ್ಲಕ್ಷ್ಯ ಹೀಗೆಯೇ ಮುಂದುವರಿದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ, ಇಲಾಖೆಯ ಎಇಇ ಸೋಮಶೇಖರ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಮಂತ ಸೇರಿದಂತೆ ಇತರರು ಉಪಸ್ಥಿತರಿದ್ದರು.
₹ 1 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಚಾಲನೆ: ಕಮಲನಗರದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಲೊನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ₹ 83.5 ಲಕ್ಷ ಹಾಗೂ ಸೋನಾಳ ಗ್ರಾಮದಲ್ಲಿ ₹ 32 ಲಕ್ಷ ಮೊತ್ತದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಕಾಮಗಾರಿ ಗುಣಮಟ್ಟದಿಂದ ಮತ್ತು ಕಾಲಮಿತಿಯೊಳಗೆ ಮಾಡಿಕೊಟ್ಟು, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ಹೊರಂಡಿ ಗ್ರಾಮದ ಹತ್ತಿರದ ಡಾ.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಮುಖಂಡ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಬಸವರಾಜ ಪಾಟೀಲ, ಶಿವಕುಮಾರ ವಡ್ಡೆ, ಶಿವು ಝುಲ್ಫೆ, ರಂಗರಾವ ಜಾಧವ, ಶಿವರಾಜ ಅಲ್ಮಾಜೆ, ನಾಗೇಶ ಪತ್ರೆ, ಮಲ್ಲಿಕಾರ್ಜುನ ದಾನಾ, ಅನಿಲ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.