ADVERTISEMENT

ಕಮಲನಗರ: ಭಕ್ತರ ಆರಾಧ್ಯ ದೈವ ಮಹಾಳಪ್ಪಯ್ಯ ಸ್ವಾಮೀಜಿ

ಪ್ರಜಾವಾಣಿ ವಿಶೇಷ
Published 4 ನವೆಂಬರ್ 2025, 6:37 IST
Last Updated 4 ನವೆಂಬರ್ 2025, 6:37 IST
ಫೋಟೋ ಕ್ಯಾಪ್ಷನ್ : 3ಕೆಎಂಎಲ್01 : ಕಮಲನಗರ ತಾಲ್ಲೂಕಿನ ಡೋಣಗಾಂವ (ಎಂ) ಗ್ರಾಮದ ಸಮೀಪವಿರುವ ಸುಕ್ಷೇತ್ರ ಮಹಾಳಪ್ಪಯ್ಯ ದೇವಸ್ಥಾನದ ಹೊರನೋಟ. 
ಫೋಟೋ ಕ್ಯಾಪ್ಷನ್ : 3ಕೆಎಂಎಲ್01 : ಕಮಲನಗರ ತಾಲ್ಲೂಕಿನ ಡೋಣಗಾಂವ (ಎಂ) ಗ್ರಾಮದ ಸಮೀಪವಿರುವ ಸುಕ್ಷೇತ್ರ ಮಹಾಳಪ್ಪಯ್ಯ ದೇವಸ್ಥಾನದ ಹೊರನೋಟ.    

ಕಮಲನಗರ: ಗುರು ಮತ್ತು ಶಿಷ್ಯ ಪರಂಪರೆಯ ಮಹಾಳಪ್ಪಯ್ಯ ಸ್ವಾಮೀಜಿ, ಈ ಭಾಗದ ಭಕ್ತರ ಇಷ್ಟಾರ್ಥ ನೆರವೇರಿಸುವ ಆರಾಧ್ಯ ದೈವ. ಗೌರಿ ಹುಣ್ಣಿಮೆ(ನ.5)ಯಂದು ನಡೆಯುವ ಜಾತ್ರೆ, ಈ ಭಾಗದಲ್ಲಿ ಪ್ರಸಿದ್ಧವಾಗಿದೆ.

ತಾಲ್ಲೂಕಿನ ಡೋಣಗಾಂವ(ಎಂ) ಗ್ರಾಮದಿಂದ 2 ಕಿ.ಮೀ. ದೂರದ ಕಾಡಿನಲ್ಲಿರುವ ಭಕ್ತಮುಡಿ ತಪೋವನ ಮಹಾಳ್ಳಪಯ್ಯ ದೇವಸ್ಥಾನವಿದೆ. ಗುರು ಹಾವಗಿಸ್ವಾಮಿ ಹಾಗೂ ಶಿಷ್ಯ ಮಹಾಳಪ್ಪಯ್ಯ ಅವರು ತಪಸ್ಸು ಕೈಗೊಂಡಿದ್ದರಿಂದ ಇದನ್ನು ತಪೋವನ ಎಂದು ಕರೆಯುತ್ತಾರೆ. ದೇವಸ್ಥಾನದ ಸುತ್ತಲಿನ 108 ಎಕರೆ ಪ್ರದೇಶದಲ್ಲಿ ಕಾಡು ಹಬ್ಬಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾವಗಿಸ್ವಾಮಿ ಸಂಸ್ಥಾನದ ಮಠಗಳು, ಧಾರ್ಮಿಕ ಕಾರ್ಯದೊಂದಿಗೆ ಹಲವು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿವೆ.

ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು, ಪ್ರತಿ ವರ್ಷ ಶ್ರಾವಣ ಮಾಸದ ನಿಮಿತ್ತ ಮೌನ ಅನುಷ್ಠಾನ, ಭಜನೆ, ಕೀರ್ತನೆ, ಸಪ್ತಾದಂತಹ ಧಾರ್ಮಿಕ ಆಚರಣೆ ಕೈಗೊಳ್ಳುತ್ತಾರೆ. ಈ ಮೂಲಕ ಭಕ್ತರನ್ನು ಸದ್ಭಾವ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತಿದ್ದಾರೆ.

ADVERTISEMENT

ಜಾತ್ರೆ ವೇಳೆ ಸುತ್ತಲಿನ ಸಾವಿರಾರು ಭಕ್ತರು ನಡಿಗೆಯಲ್ಲಿ, ಬೈಕ್‌ಗಳ ಮೇಲೆ ಹಾಗೂ ಇತರೆ ವಾಹನಗಳಲ್ಲಿ ಬಂದು ಮಹಾಳಪ್ಪಯ್ಯ ಸ್ವಾಮೀಜಿ ದರ್ಶನ ಪಡೆದು ಕಾಡಿನಲ್ಲಿಯ ಗಿಡಗಳ ಕೆಳಗೆ ಮಹಿಳೆಯರು, ಯುವಜನರು, ಮಕ್ಕಳು ಗುಂಪು ಗುಂಪಾಗಿ ಕುಳಿತು ಮನೆಯಲ್ಲಿ ಸಿದ್ಧಪಡಿಸಿದ ಚಪಾತಿ, ಶೇಂಗಾ ಹೋಳಿಗೆ, ಧಪಾಟಿ, ಮಲೋದಿ, ಜೋಳದ ರೋಟ್ಟಿ, ಮೊಸರು, ಶೆಂಗಾ ಚಟ್ನಿ ತಂದು ಊಟ ಮಾಡುವುದು ಜಾತ್ರೆಯ ವಿಶೇಷತೆಯಾಗಿದೆ.

ಹಿನ್ನೆಲೆ : ಮಹಾಳಪ್ಪಯ್ಯ ಅವರು, ಮಹಾರಾಷ್ಟ್ರದ ಹಣೇಗಾಂವ ಗ್ರಾಮದ ಮಂಡಲಪುರೆ ಕುಟುಂಬದವರು. ಹಾವಗಿಸ್ವಾಮಿ ಅಪ್ಪನವರ ಅಪ್ಪಟ ಶಿಷ್ಯರಿವರು, ಹಣೇಗಾಂವ ಗ್ರಾಮದಿಂದ ಜಾನುವಾರು ಕಾಯುತ್ತ ಭಕ್ತಮುಡಿಗೆ ಬಂದರು. ಮಹಾಳಪ್ಪಯ್ಯ ಸ್ವಾಮೀಜಿ ಅವರು ಗುರು ಹಾವಗಿಸ್ವಾಮೀಜಿಯವರ ಸೇವೆ ಮಾಡಿದರು. ಚೆನ್ನಮಲ್ಲಪ್ಪ ಸ್ವಾಮಿಜಿ ಅವರ ಬಳಿ ಕಾಂತಿಬೀಕ್ಷೆ ಬೇಡಿ ದಾಸೋಹ ಸೇವೆಗೈದರು. ಮಹಾಳಪ್ಪಯ್ಯ ತಪೋವನ ಭಕ್ತಮುಡಿಯಲ್ಲಿ ತಪಸ್ಸು ಮಾಡಿ, ಅಲ್ಲೇ ಜೀವಂತ ಸಮಾಧಿಯಾದರು ಎಂದು ಪುರಾಣದಲ್ಲಿ ಉಲ್ಲೇಖವಿದೆ.

ಪ್ರತಿ ವರ್ಷ ಗೌರಿ ಹುಣ್ಣಿಮೆಯಂದು ಮಹಾಳಪ್ಪಯ್ಯ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ ನಡೆಯುತ್ತದೆ. ಕರ್ನಾಟಕ ಮಹಾರಾಷ್ಟ್ರ ತೇಲಂಗಾಣ ಆಂಧ್ರಪ್ರದೇಶ ರಾಜ್ಯಗಳಿಂದ ಭಕ್ತರು ಆಗಮಿಸಿ ಮಹಾಳಪ್ಪಯ್ಯ ಸ್ವಾಮೀಜಿ ದರ್ಶನ ಪಡೆದು ಹರಕೆ ಹೊತ್ತ ಭಕ್ತರು ತನ್ನ ಇಷ್ಟಾರ್ಥ ಪೂರೈಸಿಕೊಳ್ಳುತ್ತಾರೆ.
–ಶಂಭುಲಿಂಗ ಶಿವಾಚಾರ್ಯರು ಡೋಣಗಾಂವ(ಎಂ) ರಂಡ್ಯಾಳ ಉದಗೀರ್‌ ಹಾವಗಿಸ್ವಾಮಿ ಮಠದ ಪೀಠಾಧಿಪತಿ
ಭಕ್ತಮುಡಿ ಮಹಾಳಪ್ಪಯ್ಯ ದೇವಸ್ಥಾನದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆ ಹಾಗೂ ಶ್ರಾಮಣ ಮಾಸದಲ್ಲಿ ಬಿಲ್ವಾರ್ಚನೆ ಕುಂಕುಮಾರ್ಚನೆ ಜಲಾಭಿಷೇಕ ರುದ್ರಾಭಿಷೇಕ ವಿಶೇಷ ಪೂಜೆ ನಡೆಸಲಾಗುತ್ತದೆ. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ.
–ಉಮಾಕಾಂತ ದೇಶಿಕೇಂದ್ರ ಸ್ವಾಮೀಜಿ ಡೋಣಗಾಂವ(ಎಂ) ಹಾವಗಿಸ್ವಾಮಿ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.