ಬಸವಲಿಂಗ ಪಟ್ಟದ್ದೇವರು
ಭಾಲ್ಕಿ: ‘ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ತಮ್ಮ ಪೂರ್ವಾಶ್ರಮದ ಸಂಬಂಧಿಕರ ಮದುವೆಯಲ್ಲಿ 20 ತೊಲ ಬಂಗಾರ ನೀಡಿದ್ದಾರೆ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾಡಿದ ಆರೋಪ ಹಸಿಸುಳ್ಳಿನಿಂದ ಕೂಡಿದೆ’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.
‘ಗದಗ ಸ್ವಾಮೀಜಿ ನೇತೃತ್ವದಲ್ಲಿ ಬಸವ ಸಂಸ್ಕೃತಿ ಅಭಿಯಾನ ಅದ್ದೂರಿಯಾಗಿ ಯಶಸ್ವಿ ಆಗಿರುವುದರಿಂದ ಕನೇರಿ ಸ್ವಾಮೀಜಿ ನಿದ್ದೆಗೆಡಿಸಿದೆ. ಅವರು ತಮ್ಮ ಮಾನಸಿಕ ನೆಮ್ಮದಿ ಕಳೆದುಕೊಂಡು ಬಾಯಿಗೆ ಬಂದಂತೆ ಬಡಬಡಿಸುತ್ತಿದ್ದಾರೆ. ಅವರು ಸೈದ್ಧಾಂತಿಕ ಹೋರಾಟವನ್ನು ಬಿಟ್ಟು ವೈಯಕ್ತಿಕ ಸುಳ್ಳು ಆರೋಪ ಮಾಡುವಷ್ಟು ಕೆಳಮಟ್ಟಕ್ಕೆ ಇಳಿದು ತೊಟ್ಟ ಕಾವಿ ಬಟ್ಟೆಗೆ ಅವಮಾನಿಸುತ್ತಿದ್ದಾರೆ’ ಎಂದಿದ್ದಾರೆ.
‘ಬಸವತತ್ವ ಪರವಾಗಿ ಗಟ್ಟಿಯಾಗಿ ನಿಂತಿರುವ ಪೂಜ್ಯರು ಹಾಗೂ ನಾಯಕರನ್ನು ಗುರಿಯಾಗಿಸಿ ಅನೇಕ ಸುಳ್ಳಿನ ಕಟ್ಟು ಕಥೆಗಳನ್ನು ಹೆಣೆಯುವ ಕನೇರಿ ಸ್ವಾಮಿ ಸುಳ್ಳಿನ ಸರದಾರರಾಗಿದ್ದಾರೆ. ಸತ್ಯಂ ವದ ಧರ್ಮಂ ಚರ ಎಂದು ಉಪದೇಶ ಮಾಡುವ ಕನೇರಿ ಸ್ವಾಮೀಜಿ ಬಾಯಿ ಬಿಚ್ಚಿದಾಗ ಒಂದು ಸುಳ್ಳು ಮಾತನಾಡುವ ಚಾಳಿ ಮಾಡಿಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಗದುಗಿನ ತೋಂಟದಾರ್ಯ ಮಠ ಹಾಗೂ ನಾಗನೂರಿನ ರುದ್ರಾಕ್ಷಿ ಮಠದ ಪೂಜ್ಯರು ಪೂರ್ವಾಶ್ರಮದ ಸಂಬಂಧಿಕರನ್ನು ಶ್ರೀಮಠದ ಸಮೀಪ ಸುಳಿಯಲು ಅವಕಾಶ ನೀಡಿಲ್ಲ. ಶ್ರೀಮಠದ ಭಕ್ತರ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗುವುದು ಜಂಗಮ ಕಾರ್ಯ. ಆದರೆ ಅದಕ್ಕೆ ಸುಳ್ಳಿನ ಬಣ್ಣ ಹಚ್ಚಿ ಗದಗ ಶ್ರೀಗಳ ವೈಯಕ್ತಿಕ ಚಾರಿತ್ರ್ಯ ಹಾಳು ಮಾಡುತ್ತಿರುವುದು ನೀಚತನವಾಗಿದೆ. ಗದುಗಿನ ಮಠ ಬಸವತತ್ವದ ಗಟ್ಟಿ ಧ್ವನಿಯಾಗಿದೆ. ಅದರ ಸ್ವಾಮೀಜಿ ಮೇಲೆ ಸುಳ್ಳು ಆರೋಪ ಮಾಡುವುದೆಂದರೆ ಬಸವತತ್ವವನ್ನು ಗಟ್ಟಿಯಾಗಿ ನಂಬಿದ ಎಲ್ಲ ಪೂಜ್ಯರ ಹಾಗೂ ಬಸವಭಕ್ತರ ಮೇಲೆ ಸುಳ್ಳತನ ಹೇರಿದ ಹಾಗೆ ಆಗುತ್ತದೆ’ ಎಂದಿದ್ದಾರೆ.
ಕನೇರಿ ಸ್ವಾಮೀಜಿ ಲಿಂಗಾಯತ ಮಠಾಧೀಶರ ಹಾಗೂ ಸಮಾಜದ ಮೇಲೆ ಸುಳ್ಳು ಆರೋಪ ಮಾಡುವುದು ಇದೇ ರೀತಿ ಮುಂದುವರಿಸಿದರೆ ಸಮಾಜ ಅವರಿಗೆ ತಕ್ಕ ಪಾಠ ಕಲಿಸುತ್ತದೆ. ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿದ್ದ ಮಠಾಧೀಶರ ಮೇಲೆ ವೈಯಕ್ತಿಕ ಸುಳ್ಳು ಆರೋಪಗಳನ್ನು ಮಾಡಿ ಹೆದರಿಸುವ ಮೂಲಕ ಈ ಹೋರಾಟದ ದಿಕ್ಕು ತಪ್ಪಿಸಬೇಕೆಂದು ಕನಸು ಕಾಣುತ್ತಿದ್ದಾರೆ. ಅದು ಎಂದಿಗೂ ನನಸಾಗುವುದಿಲ್ಲ. ನಿಮ್ಮ ಸುಳ್ಳುಗಾರಿಕೆಗೆ ಯಾರು ಮೋಸ ಹೋಗುವುದಿಲ್ಲ ಎಂದು ಹೇಳಿದ್ದಾರೆ.
‘ಕನೇರಿ ಸ್ವಾಮೀಜಿಯ ಸುಳ್ಳು ಆರೋಪಗಳಿಂದ ಯಾರೂ ಕುಗ್ಗದೆ, ಜಗ್ಗದೆ ಈ ಹೋರಾಟ ಮತ್ತಷ್ಟು ಗಟ್ಟಿಗೊಳಿಸಿ ಅವರಿಗೆ ತಿರಗೇಟು ನೀಡುವ ಮೂಲಕ ಅವರ ಹೊಲಸುಬಾಯಿ ಮುಚ್ಚಿಸಬೇಕಾಗಿದೆ’ ಎಂದು ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.