ADVERTISEMENT

ಎಲ್ಲ ಧರ್ಮದವರು ಒಗ್ಗೂಡುವುದು ಅಗತ್ಯ

ಭಾಲ್ಕಿ: ಗಡಿ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಶಿವಾನಂದ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 13:26 IST
Last Updated 30 ನವೆಂಬರ್ 2022, 13:26 IST
ಭಾಲ್ಕಿಯ ಪುರಭವನದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ನಡೆದ ಗಡಿ ಕನ್ನಡೋತ್ಸವ ಕಾರ್ಯಕ್ರಮವನ್ನು ಹವಾ ಮಲ್ಲಿನಾಥ ಮಹಾರಾಜ ಉದ್ಘಾಟಿಸಿದರು
ಭಾಲ್ಕಿಯ ಪುರಭವನದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ನಡೆದ ಗಡಿ ಕನ್ನಡೋತ್ಸವ ಕಾರ್ಯಕ್ರಮವನ್ನು ಹವಾ ಮಲ್ಲಿನಾಥ ಮಹಾರಾಜ ಉದ್ಘಾಟಿಸಿದರು   

ಭಾಲ್ಕಿ: ‘ದೇಶದ ಏಕತೆ ಮತ್ತು ಅಖಂಡತೆಗಾಗಿ ಎಲ್ಲ ಧರ್ಮದವರೂ ಒಗ್ಗಟ್ಟು ತೋರುವುದು ಅವಶ್ಯ’ ಎಂದು ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿಯ ಪುರಭವನದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ನಡೆದ ಗಡಿ ಕನ್ನಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹವಾ ಮಲ್ಲಿನಾಥ ಮಹಾರಾಜರು ತಮ್ಮ ಇಡೀ ಜೀವನವನ್ನು ದೇಶದ ಅಖಂಡತೆಗಾಗಿ ಮುಡುಪಾಗಿಟ್ಟಿರುವುದು ಶ್ಲಾಘನೀಯ. ಅವರು ಗಾಳಿಯಂತೆ ಸಂಚರಿಸಿ ದೇಶದಾದ್ಯಂತ ಎಲ್ಲರಲ್ಲಿ ರಾಷ್ಟ್ರಭಕ್ತಿ ಬೆಳೆಸುತ್ತಿರುವುದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ADVERTISEMENT

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ದೇಶಾಭಿಮಾನ, ದೇಶದ ಸಂಪತ್ತು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಧರ್ಮ, ಸಂಸ್ಕೃತಿ ಬೇರೆ ಬೇರೆ ಇದ್ದರೂ ಕೂಡ ರಾಷ್ಟ್ರದ ವಿಷಯ ಬಂದಾಗ ಎಲ್ಲರೂ ಒಂದಾಗಬೇಕು’ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಗಡಿಯಲ್ಲಿನ ಕನ್ನಡದ ಸ್ಥಿತಿಗತಿ ಕುರಿತು ಮಾತನಾಡಿದರು.

ಖಾನಾಪುರ ಆನಂದ ಆಶ್ರಮದ ಮಹಾಯೋಗಿನಿ ಜಗದೇಶ್ವರಿ, ಮಳಚಾಪುರ ಶಂಭುಲಿಂಗಾಶ್ರಮದ ಸದ್ರೂಪಾನಂದ ಸ್ವಾಮೀಜಿ, ಖಾನಾಪುರದ (ಮೈಲಾರ) ಮಲ್ಲಣ್ಣ ದೇವಸ್ಥಾನದ ಪ್ರಧಾನ ಅರ್ಚಕ ಬಸಪ್ಪ ಹಿರಿವಗ್ಗೆ, ಗೋರಚಿಂಚೋಳಿ ಸಿದ್ಧರಾಮೇಶ್ವರ ಮಠದ ಸಿದ್ಧರಾಮೇಶ್ವರ ಪಟ್ಟದ್ದೇವರು, ಖಟಕ ಚಿಂಚೋಳಿ ಹಿರೇಮಠದ ಬಸವಲಿಂಗ ಸ್ವಾಮೀಜಿ, ಬೀದರ್ ಗುರುದ್ವಾರದ ಜ್ಞಾನಿ ದರ್ಬಾರ್ ಸಿಂಗ್, ಆಣದೂರ ಬುದ್ಧಿಸ್ಟ್ ಮಹಾವಿಹಾರದ ಭಂತೆ ಜ್ಞಾನಸಾಗರ ಥೇರೋ, ಹಲಬರ್ಗಾ ಅನುಗ್ರಹ ಶಾಲೆಯ ಫಾದರ್ ಪ್ರಸನ್ನಕುಮಾರ, ಬೀದರ್ ಖಾದ್ರಿಯಾ ಚಿಸ್ತಿಯಾ ಬಂದೆನವಾಜಿಯಾದ ಸೂಫಿ ಸೈಯದ್ ಸಾಜಿದ್ ಅಲಿ ಷಾ ಅಲ್ ಹುಸೈನಿ, ಶಂಭುಲಿಂಗ ಶಿವಾಚಾರ್ಯ, ಬಸವಲಿಂಗ ದೇವರು ಹಾಗೂ ಕಸಾಪ ತಾಲ್ಲೂಕು ಸಮಿತಿ ಅಧ್ಯಕ್ಷ ನಾಗಭೂಷಣ ಮಾಮಡಿ ಇದ್ದರು.

ಸತ್ಯಸಾಯಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ನಡೆಸಿಕೊಟ್ಟರು. ಜೈ ಭಾರತ ಸೇವಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.