ADVERTISEMENT

ಕನ್ನಡ ನಾಮಫಲಕ: ಕ್ರಮಕ್ಕೆ ಕರವೇ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:41 IST
Last Updated 26 ಅಕ್ಟೋಬರ್ 2024, 15:41 IST
ಸೋಮನಾಥ 
ಸೋಮನಾಥ    

ಬೀದರ್: ‘ನಾಮಫಲಕಗಳಲ್ಲಿ ಕನ್ನಡ ಬಳಸದ ಸಂಘ, ಸಂಸ್ಥೆ ಹಾಗೂ ಕೈಗಾರಿಕೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಆಗ್ರಹಿಸಿದರು.

‘ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದನ್ನು ವಿರೋಧಿಸಿ ವೇದಿಕೆ ರಾಜ್ಯ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಹೋರಾಟ ನಡೆಸಿದಾಗ ಸರ್ಕಾರ ಹೋರಾಟಗಾರರನ್ನು ಜೈಲಿಗಟ್ಟಿ, ಧ್ವನಿ ಅಡಗಿಸಲು ಪ್ರಯತ್ನಿಸಿತು. ಆದರೆ, ನಾಮಫಲಕ ವಿಚಾರದಲ್ಲಿ ಅಧಿಕಾರಿಗಳು ಕಾರ್ಪೋರೇಟ್ ಕಂಪನಿಗಳಿಂದ ಲಂಚ ಪಡೆದು, ಕೋರ್ಟ್ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಜಿಲ್ಲೆಯಲ್ಲಿ ಜಿಲ್ಲಾ ಆಡಳಿತ ಮುಖ ನೋಡಿ ಮಣೆ ಹಾಕುವ ಕೆಲಸ ಮಾಡುತ್ತಿದೆ. ನಗರದ ಶಿವನಗರ ರಿಂಗ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ಆಂಗ್ಲ ಭಾಷೆಯ ನಾಮಫಲಕಗಳಿದ್ದರೂ ಮೌನ ವಹಿಸಿದೆ. ಅಧಿಕಾರಿಗಳು ಬಡ ಹಾಗೂ ಸಣ್ಣ ಅಂಗಡಿಯವರ ಫಲಕಗಳನ್ನು ತೆಗೆಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಸಂಘ ಸಂಸ್ಥೆ, ಅಂಗಡಿ ಮುಂಗಟ್ಟು, ಕೈಗಾರಿಕೆಗಳು ಸೇರಿದಂತೆ ರಾಜ್ಯದಲ್ಲಿ ಎಲ್ಲ ನಾಮಫಲಕಗಳಲ್ಲಿ ಮೇಲುಗಡೆ ಕನ್ನಡ ಬಳಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಹೈಕೋರ್ಟ್ ತೀರ್ಪು ನೀಡಿದೆ. ಆದರೂ, ಜಿಲ್ಲೆಯಲ್ಲಿ ಆದೇಶ ಪಾಲನೆಯಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ರಾಜಕಾರಣಿಗಳು, ಪ್ರಭಾವಿಗಳ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಆಂಗ್ಲ ಭಾಷೆಯಲ್ಲಿ ಫಲಕಗಳನ್ನು ಅಳವಡಿಸಿವೆ’ ಎಂದು ದೂರಿದರು. ಕನ್ನಡ ಬಳಸದ ಫಲಕಗಳಿಗೆ ಸೋಮವಾರದಿಂದಲೇ ಮಸಿ ಬಳಿಯಲಾಗುವುದು. ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು’ ಎಂದು ಹೇಳಿದರು.

ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟೂರೆ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಅನಿಲ್ ಹೇಡೆ, ಬಂಡೆಪ್ಪ ಕರಬಸಪ್ಪ, ವೀರೇಶ ರೆಡ್ಡಿ, ನಾಗೇಶ ಕಮಠಾಣ, ನಾಗಯ್ಯ ಸ್ವಾಮಿ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.