
ಗಾಯಕ ವಿಜಯಪ್ರಕಾಶ್ ಹಾಗೂ ತಂಡದವರು ಸಂಗೀತ ರಸಮಂಜರಿ ನಡೆಸಿಕೊಟ್ಟರು
ಬೀದರ್: ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’, ‘ಇದೇ ಹಾಡು, ಇದೇ ಭಾಷೆ ಎಂದೆಂದಿಗೂ ನನ್ನದಾಗಿರಲಿ’ ಹೀಗೆ ಕನ್ನಡ ನಾಡು ನುಡಿಯ ಮಹತ್ವ ಸಾರುವ ಹಾಡುಗಳನ್ನು ತಮ್ಮ ಅದ್ಭುತ ಕಂಠಸಿರಿಯಿಂದ ಹಾಡುತ್ತಿದ್ದಾಗ ಅಲ್ಲಿದ್ದವರ ಸಂಭ್ರಮ ನೂರ್ಮಡಿ ಹೆಚ್ಚಾಗಿತ್ತು. ಚಳಿಯಲ್ಲೂ ಸಡಗರ, ಸಂಭ್ರಮದಿಂದ ಜನ ಹೆಜ್ಜೆ ಹಾಕಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸಮರ್ಥ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಗರದ ಕರ್ನಾಟಕ ಫಾರ್ಮಸಿ ಕಾಲೇಜಿನಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ‘ಬೀದರ್ ಸಾಂಸ್ಕೃತಿಕ ಉತ್ಸವ’ದಲ್ಲಿ ಗಾಯಕ ವಿಜಯಪ್ರಕಾಶ್ ಅವರ ಗಾಯನಕ್ಕೆ ಜನ ಮನಸೋತರು.
‘ವೀಕೆಂಡ್ ಅಲ್ಲದಿದ್ದರೂ ಹೆಚ್ಚಿನ ಜನ ಸೇರಿರುವುದು ಬಹಳ ಖುಷಿ ತಂದಿದೆ. ನಿಮ್ಮೆಲ್ಲರಿಗೂ ಕನ್ನಡಾಭಿಮಾನ ಎಷ್ಟಿದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಬಹಳ ಉತ್ತಮ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರೀತಿಯ ಬೊಗಸೆ ಇಲ್ಲಿನ ಜನ ಹಂಚುತ್ತಾರೆ. ಇದಕ್ಕಾಗಿ ಇಲ್ಲಿಗೆ ಬಂದಿರುವೆ’ ಎಂದು ವಿಜಯ ಪ್ರಕಾಶ್ ಕೃತಜ್ಞತೆಯ ಮಾತುಗಳನ್ನು ಆಡಿದಾಗ ಜನ ಕರತಾಡನದ ಮೂಲಕ ಪ್ರತಿ ಕೃತಜ್ಞತೆ ಅರ್ಪಿಸಿದರು.
ದಿವಂಗತ ನಟ ಪುನೀತ್ ರಾಜಕುಮಾರ್ ನಟನೆಯ ‘ಬೊಂಬೆ ಹೇಳುತೈತೆ’ ಹಾಡು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ವಿದ್ಯುತ್ ಪ್ರವಹಿಸಿದಂತೆ ಜನರಲ್ಲಿ ಸಂಚಲನ ಉಂಟಾಗಿ, ಕರತಾಡನದ ಮೂಲಕ ಸ್ವಾಗತಿಸಿದರು. ಎಲ್ಲರೂ ಮೊಬೈಲ್ ಟಾರ್ಚ್ ಆನ್ ಮಾಡಿ, ಅದನ್ನು ತೋರಿಸುವ ಮೂಲಕ ಪುನೀತ್ ಅವರಿಗೆ ಗೌರವ ಸಮರ್ಪಿಸಿದರು.
‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ’, ‘ಸಿಂಗಾರ ಸಿರಿಯೆ’, ‘ಕಾಣದಂತೆ ಮಾಯವಾದನೋ’, ‘ಯಾರೇ ನೀ ರೋಜಾ ಹೂವೇ’ ಹಾಡಿಗೆ ಜನ ಹುಚ್ಚೆದ್ದು ಕುಣಿದರು. ಇದಕ್ಕೆ ಇನ್ನೊಬ್ಬ ಗಾಯಕಿ ಐಶ್ವರ್ಯ ರಂಗರಾಜನ್ ಕೂಡ ಸಾಥ್ ನೀಡಿದರು. ಗಾಯಕ ನಿಖಿಲ್ ಅವರು ‘ಒಂದು ಮಳೆ ಬಿಲ್ಲೆ’, ‘ನಿನ್ನಿಂದಲೇ ಕನಸೊಂದು ಶುರುವಾಗಿದೆ’ ಹಾಡಿಗೆ ಜನ ತಲೆದೂಗಿದರು.
ಈ ನಡುವೆ ವೇದಿಕೆಗೆ ಬಂದ ‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ನಟಿ ಸುಲಕ್ಷಾ ಕೈರಾ ಅವರು, ನಾನು ಬೀದರ್‌ನವಳೇ, ನಾನು ನಟಿಸಿದ ಈ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಇನ್ನು, ಅನುಶ್ರೀ ಅವರು ಆ್ಯಂಕರಿಂಗ್ ಜೊತೆಗೆ ಗಾಯಕರೊಂದಿಗೆ ಹೆಜ್ಜೆ ಹಾಕಿದರು. ಜನರನ್ನು ಹುರಿದುಂಬಿಸಿ, ಅವರು ಕುಣಿದು ಕುಪ್ಪಳಿಸುವಂತೆ ಮಾಡಿದರು.
ಕಲಾವಿದ ಪೂರ್ಣಚಂದ್ರ ಮೈನಾಳೆ ಹಾಗೂ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟನೆ ನೆರವೇರಿಸಿ, ಕನ್ನಡ ದ ಮಹತ್ವ ಸಾರುವುದಕ್ಕಾಗಿ ಹಮ್ಮಿಕೊಂಡಿರುವುದು ಉತ್ತಮ ಕೆಲಸ ಎಂದರು.
ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಸಮರ್ಥ ಸೇವಾ ಸಂಸ್ಥೆಯ ಅಧ್ಯಕ್ಷ ವೀರೇಶ ಸ್ವಾಮಿ, ಸಲಹೆಗಾರರೂ ಆದ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.