ADVERTISEMENT

ಕಲ್ಯಾಣದಲ್ಲಿ ರಣ ಕಹಳೆ ಮೊಳಗಿಸಿದ ಕಾಂಗ್ರೆಸ್: ಬಿಜೆಪಿ ವಿರುದ್ಧ ವಾಗ್ದಾಳಿ

ಪ್ರಜಾಧ್ವನಿ ಯಾತ್ರೆಯಲ್ಲಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 16:03 IST
Last Updated 3 ಫೆಬ್ರುವರಿ 2023, 16:03 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿದರು   

ಬೀದರ್: ಶರಣರ ನಾಡು ಬಸವಕಲ್ಯಾಣದಲ್ಲಿ ಶುಕ್ರವಾರ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡುವ ಮೂಲಕ ಕಾಂಗ್ರೆಸ್‌ ಮುಖಂಡರು ವಿಧಾನಸಭೆ ಚುನಾವಣೆಗೆ ಉತ್ತರ ಕರ್ನಾಟಕದಲ್ಲಿ ರಣ ಕಹಳೆ ಮೊಳಗಿಸಿದರು. ಚುನಾವಣೆ ಅಧಿಸೂಚನೆ ಹೊರಡಿಸುವ ಮೊದಲೇ ಚುನಾವಣಾ ಪ್ರಚಾರ ಆರಂಭಿಸಿದರು.

ವಿಶೇಷ ವಿಮಾನದ ಮೂಲಕ ಬೀದರ್‌ಗೆ ಬಂದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡಕ್ಕೆ ಬೀದರ್‌ ನಗರದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಮುಖಂಡರು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ನಿವಾಸದಲ್ಲಿ ಉಪಾಹಾರ ಸೇವಿಸಿ ನೇರವಾಗಿ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು. ನಂತರ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ‘ಬಿಜೆಪಿಯವರಿಗೆ ಸಮಾನತೆ, ಸಹಿಷ್ಣುತೆ ಹಾಗೂ ಸಹಬಾಳ್ವೆಯಲ್ಲಿ ನಂಬಿಕೆ ಇಲ್ಲ. ಬಿಜೆಪಿ ಮೂರು ವರ್ಷಗಳಲ್ಲಿ ರಾಜ್ಯವನ್ನು ಕೊಳಕು ಮಾಡಿದೆ. ಕೊಳೆ ತೊಳೆಯಲು ರಾಜ್ಯದ ಜನ ಸಂವಿಧಾನ ಪರ ಇರುವ ಕಾಂಗ್ರೆಸ್‌ಗೆ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕಾಂಗ್ರೆಸ್‌ನ ತಂಡ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದೆ. ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿರುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್‌ ಕೊಡಲಿದೆ. ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೂ ಬರಲಿದೆ. ಕಾಂಗ್ರೆಸ್‌ ಕಾರ್ಯಕರ್ತರು ಉತ್ಸಾಹದಿಂದ ತಮ್ಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಕೋರಿದರು.

‘ಬಸವಾದಿ ಶರಣರು ನುಡಿದಂತೆ ನಡೆದವರು. ಅವರ ದಾರಿಯಲ್ಲಿ ಸಾಗಲು ಇಲ್ಲಿಂದ ರಥ ಯಾತ್ರೆ ಆರಂಭಿಸಿದೆ. ಬಿಜೆಪಿಯಂತಹ ಭ್ರಷ್ಟ ಹಾಗೂ ಜನ ವಿರೋಧಿ ಸರ್ಕಾರ ನಾವು ಎಂದೂ ಕಂಡಿಲ್ಲ. ಮನುವಾದದ ಪರವಾಗಿರುವ ಬಿಜೆಪಿ ಸರ್ಕಾರವನ್ನು ತೊಲಗಿಸಬೇಕು’ ಎಂದು ಹೇಳಿದರು.

’ಬಿಜೆಪಿಯವರು ವಿ.ಡಿ.ಸಾವರ್ಕರ್ ಹಾಗೂ ಗೋಡ್ಸೆ ವಂಶಸ್ಥರು. ಇಂಥವರಿಂದ ದೇಶಭಕ್ತಿ ಪಾಠ ಕಲಿಯುವ ಅಗತ್ಯವಿಲ್ಲ. ಹಿಂದೂ - ಮುಸ್ಲಿಂರನ್ನು ಮಹಾತ್ಮ ಗಾಂಧಿ ಒಗ್ಗೂಡಿಸುತ್ತಿರುವುದನ್ನು ಕಂಡು ಗೋಡ್ಸೆ ಗಾಂಧಿಯನ್ನು ಕೊಂದರು. ಬಿಜೆಪಿಯವರು ಯಾವುದೇ ತ್ಯಾಗ, ಬಲಿದಾನ ಇಲ್ಲದೆ 16 ವರ್ಷ ಅಧಿಕಾರ ಮಾಡಿದ್ದಾರೆ’ ಎಂದು ಹರಿಹಾಯ್ದರು.

‘ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆ ಗಗನಕ್ಕೆ ಏರಿದೆ. ಒಳ್ಳೆಯ ದಿನಗಳು ಬರಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುಳ್ಳು ಹೇಳುತ್ತಲೇ ಇದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದ ಮೋದಿ ಅವರು ರೈತರ ಒಂದು ಪೈಸೆ ಸಾಲ ಮನ್ನಾ ಮಾಡಿಲ್ಲ’ ಎಂದರು.

ಬಿಜೆಪಿ ಮೇಲ್ವರ್ಗದವರ ಹಿತೈಷಿ: ‘ಬಿಜೆಪಿ ಮೇಲ್ವರ್ಗದವರ ಹಿತೈಷಿಯಾಗಿದೆ. ಆದರೆ, ಕಾಂಗ್ರೆಸ್ ಹಿಂದುಳಿದ ವರ್ಗಗಳ, ದಲಿತರ, ಅಲ್ಪಸಂಖ್ಯಾತರ ಕಲ್ಯಾಣವನ್ನು ಬಯಸುತ್ತದೆ. ಬಸವಣ್ಣನವರ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ಅಂತೆಯೇ ಕಲ್ಯಾಣ ನಾಡಿನಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಗೊಂಡ, ರಾಜಗೊಂಡ ಮತ್ತು ಟೋಕರಿ ಕೋಲಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ಈ ಸಮುದಾಯಗಳ ನೆರವಿಗೆ ಬರುತ್ತಿಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಯನ್ನು ದಾಖಲೆ ಸಮೇತ ಎದುರಿಗಿಡುತ್ತೇವೆ. ಅವರು ಸಿದ್ದರಾಮಯ್ಯನವರ ಕಾಲದಲ್ಲಿ ಭ್ರಷ್ಟಾಚಾರ ಇತ್ತು ಎಂಬ ಆರೋಪ ಮಾಡಿದ್ದಾರೆ. ಅದನ್ನು ಸಾಬೀತುಗೊಳಿಸಿದರೆ ನಾನು
ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ' ಎಂದು ಸವಾಲು ಹಾಕಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ‘ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಭ್ರಷ್ಟ ಹಾಗೂ ಜನ ವಿರೋಧಿ ಬಿಜೆಪಿ ಸರ್ಕಾರವನ್ನು ಮತದಾರರು ಕಿತ್ತೆಯಬೇಕು' ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಗೀತಾ ಚಿದ್ರಿ, ಮೀನಾಕ್ಷಿ ಸಂಗ್ರಾಮ, ಮಾಜಿ ಶಾಸಕ ಅಶೋಕ ಖೇಣಿ, ವಿಧಾನ ಪರಿಷತ್‌ ಮಾಜಿ ಸದಸ್ಯ ವಿಜಯಸಿಂಗ್, ಎಐಸಿಸಿ ಸದಸ್ಯ ಆನಂದ ದೇವಪ್ಪ,

ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್, ಅಜಯಸಿಂಗ್, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ್, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಭೀಮರಾವ್‌ ಪಾಟೀಲ, ಡಾ.ಶರಣಪ್ರಕಾಶ ಪಾಟೀಲ, ಐ.ಜಿ.ಸನದಿ, ಬಸವರಾಜ ಬುಳ್ಳಾ, ಮಾಲಾ ನಾರಾಯಣರಾವ್, ಧನರಾಜ್‌ ತಾಳಂಪಳ್ಳಿ, ನಗರಸಭೆ ಅಧ್ಯಕ್ಷೆ ಶಹಾಜಹಾನಾ ತನ್ವೀರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.