ADVERTISEMENT

ಒಳ ಮೀಸಲು ಗಣತಿ ಅವೈಜ್ಞಾನಿಕ: ಮಾರುತಿ ಬೌದ್ಧೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:17 IST
Last Updated 11 ಆಗಸ್ಟ್ 2025, 4:17 IST
ಮಾರುತಿ ಬೌದ್ಧೆ
ಮಾರುತಿ ಬೌದ್ಧೆ   

ಬೀದರ್: ‘ನ್ಯಾ.ಎಚ್‌.ಎನ್.ನಾಗಮೋಹನದಾಸ್ ಸಮಿತಿ ನಡೆಸಿದ ಗಣತಿ ಅವೈಜ್ಞಾನಿಕವಾಗಿದೆ. ಅದನ್ನು ನಾವು ಒಪ್ಪುವುದಿಲ್ಲ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ನಾಗಮೋಹನದಾಸ್ ಸಮಿತಿ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ (ಹೊಲೆಯ) ಸಮುದಾಯದವರ ಸಂಖ್ಯೆ ಕಡಿಮೆ ತೋರಿಸಿ ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ನಡೆದಿದೆ. ಗಣತಿ ಸರಿಯಾಗಿ ನಡೆದಿಲ್ಲ. ಕೆಲಸ ಅರಸಿಕೊಂಡು ಹೋದವರ ಮನೆಯಲ್ಲಿ ಯಾರೂ ಇಲ್ಲ ಎಂದು ಚೀಟಿ ಅಂಟಿಸಲಾಗಿದೆ. ಇದರಿಂದ ಲಕ್ಷಗಟ್ಟಲೇ ಜನರನ್ನು ಗಣತಿಯಿಂದ ಕೈಬಿಡಲಾಗಿದೆ. ಗಣತಿ ಸಂದರ್ಭದಲ್ಲಿ ಜಾತಿ ಕಾಲಂ ಜೊತೆಗೆ ಧರ್ಮದ ಕಾಲಂ ಕೂಡ ಕೊಡಲಿಲ್ಲ. ಹೀಗಾಗಿ ಸರ್ಕಾರ ವರದಿ ಜಾರಿಗೆ ಮುನ್ನ ಉಪ ಸಮಿತಿ ರಚನೆ ಮಾಡಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ರಮೇಶ ಡಾಕುಳಗಿ ಮಾತನಾಡಿ,‘ನ್ಯಾ.ನಾಗಮೋಹನದಾಸ್ ವರದಿ ಬಗ್ಗೆ ಸಮಗ್ರ ಚರ್ಚೆ ನಡೆಸಿ ಲೋಪದೋಷ ಸರಿಪಡಿಸಬೇಕು’ ಎಂದರು.

ADVERTISEMENT

ವಿಠಲದಾಸ್ ಪ್ಯಾಗೆ ಮಾತನಾಡಿ,‘101 ಜಾತಿಗಳಲ್ಲಿ 49 ಜಾತಿಗಳು ಬಲಗೈ ಸಮುದಾಯಕ್ಕೆ ಸೇರಿವೆ. ಈ ವಿಷಯ ನಾವು ಹಿಂದೆಯೇ ನಾಗಮೋಹನದಾಸ್ ಅವರಿಗೆ ತಿಳಿಸಿದ್ದೇವೆ. ಆದರೆ, ಇಷ್ಟು ದಿನ ನೀವು ಹೆಚ್ಚು ತುಪ್ಪ ತಿಂದಿದ್ದೀರಿ. ಒಂದೆರಡು ಚಮಚ ತುಪ್ಪ ಕಡಿಮೆ ತಿನ್ನಿರಿ ಎಂದು ಹೇಳಿರುವ ನಾಗಮೋಹನದಾಸ್ ಅವರು ಹಾಗೂ ಮನುವಾದಿಗಳು ನಮಗೆ ವ್ಯವಸ್ಥಿತವಾಗಿ ಅನ್ಯಾಯ ಮಾಡಲು ಹೊರಟಿದ್ದಾರೆ. ಈ ವರದಿ ನಾವು ಒಪ್ಪುವುದಿಲ್ಲ. ಒಂದು ವೇಳೆ ಜಾರಿ ಮಾಡಿದರೆ ಹೋರಾಟ ಮಾಡಲಾಗುವುದು’ ಎಂದರು.

ಅನೀಲಕುಮಾರ ಬೆಲ್ದಾರ್ ಮಾತನಾಡಿ,‘ಈ ಹಿಂದೆಯೇ ನ್ಯಾ.ನಾಗಮೋಹನದಾಸ್ ಅವರು ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿದ್ದರು. ಒಂದು ಚಮಚ ತುಪ್ಪ ನಿಮಗೆ ಕಡಿಮೆ ಬಂದರೂ ತಾಳ್ಮೆವಹಿಸಿ ಎಂದಿದ್ದರು. ಹೀಗಾಗಿ ತಾಂತ್ರಿಕ ನೆಪ ಮುಂದಿಟ್ಟುಕೊಂಡು ಬಲಗೈ ಸಮುದಾಯದವರನ್ನು ತುಳಿಯುವ ಹುನ್ನಾರ ನಡೆದಿದೆ’ ಎಂದು ಹೇಳಿದರು.

ಮುಖಂಡ ಶಿವರಾಜ ಕುದರೆ, ದೇವಿಂದ್ರ ಸೋನಿ, ಉಮೇಶ ಸ್ವಾರಳ್ಳಿಕರ್ ಮಾತನಾಡಿದರು.

ಮುಖಂಡ ಬಕ್ಕಪ್ಪ ಕೋಟೆ, ಬಾಬು ಪಾಸ್ವಾನ್, ಕಾಶಿನಾಥ ಚಲ್ವಾ, ಮಹೇಶ ಗೋರನಾಳಕರ್, ವಿನಯ ಮಾಳಗೆ, ವಿನೋದ ಅಪ್ಪೆ, ವಿನೋದ ಬಂದಗೆ, ಶಿವಕುಮಾರ ನೀಲಿಕಟ್ಟಿ, ರಾಜಕುಮಾರ ಬನ್ನೇರ್, ಸುನೀಲ ಸಂಗಮ, ಪ್ರಸನ್ನ ಡಾಂಗೆ, ರಮೇಶ ಮಂದಕನಳ್ಳಿ, ಶರಣು ಫುಲೆ ಹಾಗೂ ಶ್ರೀಪತರಾವ ದೀನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.