ADVERTISEMENT

55 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಸರ್ಕಾರದ ಗಮನಕ್ಕೆ: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 4:59 IST
Last Updated 26 ಆಗಸ್ಟ್ 2025, 4:59 IST
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಪ್ರಜಾವಾಣಿ ವಾರ್ತೆ

ಬೀದರ್‌: ‘ರಾಜ್ಯದಲ್ಲಿ 55 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಕರ್ನಾಟಕ ಸಾಹಿತ್ಯ ಸಂಘದಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ಕನ್ನಡ ಶಾಲೆಗಳ ಸ್ಥಿತಿ-ಗತಿ ಪರಿಹಾರೋಪಾಯಗಳು’ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಕನ್ನಡ ವಿಷಯದಲ್ಲಿ ಅನೇಕ ವಿದ್ಯಾರ್ಥಿಗಲೂ ಅನುತೀರ್ಣರಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಹುಡಕಬೇಕಾಗಿದೆ. ಸರ್ಕಾರ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವುದರ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕು ಎಂದರು.

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಎಲ್ಲ ವಲಯಗಳಿಗೆ ಅನುಕೂಲಗಳು ದೊರಕಬೇಕು. ಸರ್ಕಾರದ ನಿಲುವು ಅಚಲವಾಗಿದೆ. ಎಸ್‌ಇಪಿ ಜಾರಿಗೆ ಬರಬೇಕು. ಹೀಗಾದರೆ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ. ಕನ್ನಡ ಕಟ್ಟುವಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಅಧಿಕಾರಿಗಳು, ಪೋಷಕರ ಸಹಾಯ ಸಹಕಾರ ದೂರದೃಷ್ಟಿ ಅವಶ್ಯಕವಾಗಿದೆ ಎಂದು ತಿಳಿಸಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್‌ ಮಾತನಾಡಿ, ಕರ್ನಾಟಕದಲ್ಲಿ ಶತಮಾನ ಕಂಡ ಅನೇಕ ಶಾಲೆಗಳಿವೆ. ಅವುಗಳಿಗೆ ಸರ್ಕಾರ ವಿಶೇಷ ಸೌಲಭ್ಯ ಕೊಡಬೇಕೆಂಬ ದಿಸೆಯಲ್ಲಿ ಪ್ರಾಧಿಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಕನ್ನಡ ಶಾಲೆಗಳಿವೆ. ಅವುಗಳಿಗೆ ಶಕ್ತಿ ತುಂಬುವ ಕೆಲಸ ಪ್ರಾಧಿಕಾರ ಮಾಡಲಿದೆ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಅನುದಾನಿತ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಕನ್ನಡ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮವಾಗಿ ಪರಿವರ್ತನೆ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸಂಸ್ಕೃತಿ ಚಿಂತಕ ಕಾಶಿನಾಥ ಚೆಲ್ವಾ, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಇದ್ದರು. ಎಸ್.ಬಿ. ಕುಚಬಾಳ ನಾಡಗೀತೆ ಹಾಡಿದರು. ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರೆ, ಜಂಟಿ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಕೋರೆ ನಿರೂಪಿಸಿದರು. ಸುರೇಖಾ ಬಿರಾದಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.