ಬೀದರ್: ಕೋವಿಡ್ ಸೋಂಕಿನ ಕಾರಣ ಚುನಾವಣೆ ನೀತಿ ಸಂಹಿತೆಯಿಂದ ಜನಪ್ರತಿನಿಧಿಗಳಿಗೆ ವಿನಾಯಿತಿ ಕಲ್ಪಿಸಬೇಕು ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ರಾಜ್ಯ ಚುನಾವಣಾ ಆಯುಕ್ತರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ನಿಯಂತ್ರಣಕ್ಕೆ ಜಿಲ್ಲಾ ಆಡಳಿತ ಹರಸಾಹಸ ಪಡುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜನಪ್ರತಿನಿಧಿಯಾದ ನಾನು ಅಸಹಾಯಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
ನೀತಿ ಸಂಹಿತೆಯಿಂದಾಗಿ ಜಿಲ್ಲಾ ಆಡಳಿತ, ಆರೋಗ್ಯ, ಪೊಲೀಸ್ ಹಾಗೂ ಸಂಬಂಧಿಸಿದ ಇಲಾಖೆಗಳ ಜತೆ ಸಭೆ ನಡೆಸಲು, ಅಗತ್ಯ ಸಲಹೆ ನೀಡಲು, ಸರ್ಕಾರದ ನಿಯಮಗಳು ಪಾಲನೆಯಾಗುತ್ತಿವೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲು ಆಗುತ್ತಿಲ್ಲ. ಮೂಕಪ್ರೇಕ್ಷಕನಾಗುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೀತಿ ಸಂಹಿತೆಯಿಂದ ವಿನಾಯಿತಿ ಕಲ್ಪಿಸಿ, ಕೋವಿಡ್‍ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲು ಹಾಗೂ ಪ್ರಗತಿ ಪರಿಶೀಲಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.