ADVERTISEMENT

ಕೆಕೆಎಚ್‍ಆರ್‍ಎಸಿಎಸ್: ಹಣ್ಣಿನ ಸಸಿ ಉಚಿತ ವಿತರಣೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 19:30 IST
Last Updated 8 ಫೆಬ್ರುವರಿ 2023, 19:30 IST
ರೇವಣಸಿದ್ದಪ್ಪ ಜಲಾದೆ
ರೇವಣಸಿದ್ದಪ್ಪ ಜಲಾದೆ   

ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಜಿಲ್ಲೆಯಲ್ಲಿ ಗುರುವಾರ(ಫೆ. 9)ದಿಂದ ರೈತರಿಗೆ ಎಂಟು ಬಗೆಯ ಹಣ್ಣಿನ ಸಸಿಗಳನ್ನು ಉಚಿತವಾಗಿ ವಿತರಿಸಲಿದೆ.
ರೈತರ ಆರ್ಥಿಕ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗಿ ಸಂಘದಿಂದ ಮಾವು, ಪೇರಲ, ಚಿಕ್ಕು, ಸೀತಾಫಲ, ನೇರಳೆ, ನಿಂಬೆ, ಮಾಗಿನಿ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.
ಬೀದರ್‍ನ ಪ್ರತಾಪನಗರದ ಜನಸೇವಾ ಶಾಲೆ ಸಭಾಂಗಣ, ಭಾಲ್ಕಿ ತಾಲ್ಲೂಕಿನ ಚಳಕಾಪುರದ ಸಿದ್ಧಾರೂಢ ಮಠದ ಸಮೀಪ, ಹುಮನಾಬಾದ್ ಪಟ್ಟಣದ ಲಕ್ಷ್ಮಿ ವೆಂಕಟೇಶ್ವರ ಶಾಲೆ ಆವರಣ, ಔರಾದ್ ತಾಲ್ಲೂಕಿನ ತೇಗಂಪುರ, ಬಸವಕಲ್ಯಾಣ ನಗರದ 108 ಅಡಿಯ ಬಸವೇಶ್ವರ ಮೂರ್ತಿ ಹತ್ತಿರ, ಹುಲಸೂರು ಪಟ್ಟಣದ ಪ್ರವೀಣ ಕಾಡಾದಿ ಅವರ ಹೊಲ ಹಾಗೂ ಚಿಟಗುಪ್ಪ ತಾಲ್ಲೂಕಿನ ಬನ್ನಳ್ಳಿಯ ಹಣಮಂತರಾವ್ ಪಾಟೀಲ ಅವರ ಹೊಲದಲ್ಲಿ ಸಸಿಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.
ರೈತರು ಹಾಗೂ ಪರಿಸರ ಪ್ರೇಮಿಗಳು ಪಹಣಿ ಹಾಗೂ ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿಗಳನ್ನು ಕೊಟ್ಟು ಆಯಾ ತಾಲ್ಲೂಕಿನ ಸ್ಥಳಗಳಲ್ಲಿ ಸಸಿಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

* * *

ವಿಶ್ವಕರ್ಮರ ಅಭಿವೃದ್ಧಿಗೆ ಕೇಂದ್ರದ ಯೋಜನೆ ನೆರವು

ADVERTISEMENT

ಬೀದರ್: ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಘೋಷಿಸಿರುವ ವಿಶ್ವಕರ್ಮ ಕೌಶಲ ಸಮ್ಮಾನ ಯೋಜನೆಯು ವಿಶ್ವಕರ್ಮರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಬೀದರ್ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಪ್ರಮುಖರು ಹೇಳಿದ್ದಾರೆ.
ಯೋಜನೆ ವಿಶ್ವಕರ್ಮ ಸಮುದಾಯದ ಜನರಿಗೆ ಆರ್ಥಿಕ ನೆರವು ಒದಗಿಸಲಿದೆ. ಅವರ ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಕೌಶಲ ತರಬೇತಿ, ಮಾರುಕಟ್ಟೆ ಅರಿವು, ಸ್ಥಳೀಯ ಹಾಗೂ ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕ, ಡಿಜಿಟಲ್ ಪಾವತಿ ಹಾಗೂ ಸಾಮಾಜಿಕ ಭದ್ರತೆಗೆ ಸಹಕಾರಿಯಾಗಲಿದೆ ಎಂದು ಸಮಿತಿಯ ಅಧ್ಯಕ್ಷ ಮಹೇಶ ಪಂಚಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ಪ್ರಮುಖರಾದ ಶಾಮರಾವ್ ವಿಶ್ವಕರ್ಮ, ಶ್ರೀನಿವಾಸ ವಿಶ್ವಕರ್ಮ, ಅಣ್ಣೆಪ್ಪ ವಿಶ್ವಕರ್ಮ, ನಾರಾಯಣರಾವ್ ವಿಶ್ವಕರ್ಮ, ಪಾಂಡುರಂಗ ವಿಶ್ವಕರ್ಮ, ದತ್ತಾತ್ರಿ ವಿಶ್ವಕರ್ಮ, ಪ್ರಶಾಂತ ವಿಶ್ವಕರ್ಮ, ಸಂಗೀತಾ, ಮಂಜುಳಾ ಹಾಗೂ ಸುಲೋಚನಾ ತಿಳಿಸಿದ್ದಾರೆ.
ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ರಾಷ್ಟ್ರಮಟ್ಟದಲ್ಲಿ ವಿಶ್ವಕರ್ಮರಿಗಾಗಿ ಘೋಷಿಸಿದ ಮೊದಲ ಪ್ಯಾಕೇಜ್ ಇದಾಗಿದೆ. ವಿಶ್ವಕರ್ಮರು ಬರುವ ದಿನಗಳಲ್ಲಿ ಜಾರಿಯಾಗಲಿರುವ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.