
ಔರಾದ್: ‘ಬೆಳೆ ರಕ್ಷಣೆ, ಕೀಟ ನಿರ್ವಹಣೆ ಸೇರಿದಂತೆ ಕೃಷಿಗೆ ಸಂಬಂಧಿಸಿದಂತೆ ‘ಕೃಷಿವಾಸ್’ ಆ್ಯಪ್ ಮೂಲಕ ರೈತರಿಗೆ ಮಾಹಿತಿ ನೀಡಲಾಗುವುದು’ ಎಂದು ಕೃಷಿ ವಿಜ್ಞಾನಿ ಎ.ಜಿ.ಶ್ರೀನಿವಾಸ ಹೇಳಿದರು.
ತಾಲ್ಲೂಕಿನ ಕಂದಗೂಳ ಗ್ರಾಮದಲ್ಲಿ ಶನಿವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯ ಎಸ್‌ಬಿಐ ಸ್ಮಾರ್ಟ್‌ಕ್ರಾಪ್ ಯೋಜನೆಯಡಿ ನಡೆದ ರೈತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಇಂತಹ ಸಮಸ್ಯೆಗಳು ಎದುರಾದಾಗ ರೈತರು ನಿಖರವಾದ ನಿರ್ವಹಣಾ ಕ್ರಮಗಳನ್ನು ಬಳಸಬೇಕು, ಇದಕ್ಕಾಗಿ ಮೊಬೈಲ್ ಆಪ್ ಮೂಲಕ ಮಾಹಿತಿ ಪಡೆಯಬೇಕು’ ಎಂದರು.
‘ಬೆಳೆಗಳಲ್ಲಿ ಕಂಡು ಬರುವ ಜೈವಿಕ ಹಾಗೂ ಅಜೈವಿಕ ಸಮಸ್ಯೆಗಳು ಇಳುವರಿ ಮೇಲೆ ಹೇಗೆ ಪರಿಣಾಮ ಬೀರುತ್ತವೆ’ ಎಂಬುದನ್ನು ವಿವರಿಸಿದರು.
ಅಗ್ರಿ ಬ್ರಿಜ್ ಸಂಸ್ಥೆಯ ಮೋಹನ್ ಬಾಬು ಅವರು ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮಾಹಿತಿ ನೀಡಿದರು. ನಂತರ ರೈತರ ಹೊಲಗಳಿಗೆ ಭೇಟಿ ನೀಡಿ ಕೃಷಿ ವಾಸ್ ಆಪ್‌ನಲ್ಲಿ ಗುರುತಿಸಲಾದ ಸಮಸ್ಯೆಗಳ ಲಕ್ಷಣಗಳನ್ನು ನೈಜ ಹೊಲದ ಬೆಳೆಗಳಲ್ಲಿ ಪರಿಶೀಲಿಸಿ, ತಂತ್ರಜ್ಞಾನದ ನಿಖರತೆಯನ್ನು ದೃಢಪಡಿಸಲಾಯಿತು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಹಾರ ಸಂಸ್ಕರಣಾ ವಿಭಾಗದ ಪ್ರಾಧ್ಯಾಪಕ ಶರಣಗೌಡ ಹಿರೇಗೌಡ, ಯೋಜನೆ ಸಹ-ಸಂಶೋಧನಾ ವಿಜ್ಞಾನಿಗಳಾದ ನಿಂಗದಳ್ಳಿ ಮಲ್ಲಿಕಾರ್ಜುನ, ಜ್ಞಾನದೇವ, ಯೋಜನಾ ಸಹಾಯಕ ಅನಿಲಕುಮಾರ, ರೈತರಾದ ಪಾಂಡುರಂಗ ಪಾಟೀಲ, ಶಿವಾಜಿ ಪಾಟೀಲ, ನಿತೀಶ ಪಾಟೀಲ, ನಾಗೇಶ ಪಾಟೀಲ, ಮುಕುಂದರಾವ ಬಿರಾದಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.