ADVERTISEMENT

ಕೆಎಸ್‌ಸಿಎ ವತಿಯಿಂದ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಯೋಜನೆ: ಕುಶಾಲ್‌ ಪಾಟೀಲ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:25 IST
Last Updated 13 ಡಿಸೆಂಬರ್ 2025, 6:25 IST
ಕೆಎಸ್‌ಸಿಎ ರಾಯಚೂರು ವಲಯ ಸಂಚಾಲಕರಾಗಿ ಆಯ್ಕೆಯಾದ ಕುಶಾಲ್ ಪಾಟೀಲ್ ಗಾದಗಿ ಅವರಿಗೆ ಬೀದರ್ ನೆಹರೂ ಕ್ರೀಡಾಂಗಣದಲ್ಲಿ ಸತ್ಕರಿಸಲಾಯಿತು
ಕೆಎಸ್‌ಸಿಎ ರಾಯಚೂರು ವಲಯ ಸಂಚಾಲಕರಾಗಿ ಆಯ್ಕೆಯಾದ ಕುಶಾಲ್ ಪಾಟೀಲ್ ಗಾದಗಿ ಅವರಿಗೆ ಬೀದರ್ ನೆಹರೂ ಕ್ರೀಡಾಂಗಣದಲ್ಲಿ ಸತ್ಕರಿಸಲಾಯಿತು    

ಬೀದರ್: ಜಿಲ್ಲಾಡಳಿತ ಸೂಕ್ತ ಜಾಗ ನೀಡಿದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ವತಿಯಿಂದ ನಗರದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲು ಪ್ರಯತ್ನಿಸಲಾಗುವುದು ಎಂದು ಸಂಸ್ಥೆಯ ರಾಯಚೂರು ವಲಯ ನೂತನ ಸಂಚಾಲಕ ಕುಶಾಲ್‌ ಪಾಟೀಲ್ ಗಾದಗಿ ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಗಜಾನನ ಕ್ರಿಕೆಟ್ ಕ್ಲಬ್, ವಿಜಯ್ ಕ್ರಿಕೆಟ್ ಕ್ಲಬ್, ಬೀದರ್ ಕ್ರಿಕೆಟ್ ಸಂಸ್ಥೆ ಹಾಗೂ ಕ್ರಿಕೆಟ್ ತರಬೇತುದಾರರಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಇಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆಗೆ ದಶಕದ ಹಿಂದೆಯೇ ಕೆಎಸ್‌ಸಿಎ ಚಾಲನೆ ನೀಡಿತ್ತು. ಕಾರಣಾಂತರದಿಂದ ಅದು ನನೆಗುದಿಗೆ ಬಿದ್ದಿತ್ತು. ಈ ಪ್ರಕ್ರಿಯೆಗೆ ಮತ್ತೆ ಈಗ ಮರುಚಾಲನೆ ನೀಡುವೆ. ಶೀಘ್ರವೇ ಈ ಸಂಬಂಧ ಸಂಸ್ಥೆ ನೂತನ ಅಧ್ಯಕ್ಷ ವೆಂಕಟೇಶಪ್ರಸಾದ್ ಅವರೊಂದಿಗೆ ಚರ್ಚಿಸುವೆ ಎಂದು ಹೇಳಿದರು.

ADVERTISEMENT

ಇಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣ ಸಂಬಂಧ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಎರಡು ಕಡೆ ಜಾಗ ಪರಿಶೀಲಿಸಿದ್ದಾರೆ. ಸಚಿವರು ವೀಕ್ಷಿಸಿದ ಜಾಗದಲ್ಲಿ ರೇಷ್ಮೆ ಇಲಾಖೆ ಜಾಗ ಉತ್ತಮವಿದೆ ಎಂಬ ಅಭಿಪ್ರಾಯವಿದೆ. ಈ ವಿಷಯ ಸಂಬಂಧ ಶನಿವಾರ ಅಥವಾ ಭಾನುವಾರ ಸಚಿವ ಖಂಡ್ರೆ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಜಿಲ್ಲಾಡಳಿತ ಸೂಕ್ತ ಜಾಗ ಒದಗಿಸಿದರೆ ಸಂಸ್ಥೆಯಿಂದ ಕ್ರೀಡಾಂಗಣ ನಿರ್ಮಾಣದ ಯೋಜನೆಗೆ ಚಾಲನೆ ನೀಡಲು ಯತ್ನಿಸಲಾಗುವುದು. ಇಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಿಸಬೇಕೆಂಬುದು ನನ್ನ ಪ್ರಥಮಾದ್ಯತೆಯಲ್ಲಿ ಸೇರಿದೆ ಎಂದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ, ರೋಟರಿ ಕಲ್ಯಾಣ ವಲಯದ ಅಸಿಸ್ಟೆಂಟ್‌ ಗವರ್ನರ್ ಹಾವಶೆಟ್ಟಿ ಪಾಟೀಲ್, ಬೀದರ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅನೀಲಕುಮಾರ ದೇಶಮುಖ, ಕೆಎಸ್‌ಸಿಎ ಬೀದರ್ ಜಿಲ್ಲಾ ಮುಖ್ಯ ಕೋಚ್ ಸಂಜಯ್ ಜಾಧವ್, ಪ್ರಮುಖರಾದ ಯುವರಾಜ ಉನ್ನಿ, ವಿಕ್ಕಿ ಅಥವಾಲ್, ಮಹ್ಮದ್ ಅಝರ್, ಮುಕ್ರಮ್ ಖಾನ್, ಸಚಿನ್ ಕೊಳ್ಳುರ್, ರವೀಂದ್ರ, ರಾಜೇಂದ್ರ ಶರ್ಮಾ, ಮಲ್ಲಿಕಾರ್ಜುನ ಕ್ಯಾಸಾ, ಮಹೇಶ ರಾಗಾ, ನಿತಿನ್ ಕರ್ಪೂರ್, ಕಾಶಿನಾಥ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.