ADVERTISEMENT

ಬೀದರ್ | ಸಾರಿಗೆ ಮುಷ್ಕರ: ಪ್ರಯಾಣಿಕರ ಪರದಾಟ

ಖಾಸಗಿ ವಾಹನಗಳಿಗೆ ಭಾರಿ ಬೇಡಿಕೆ; ಎಂದಿನಂತೆ ತೆಲಂಗಾಣ ಬಸ್‌ಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:15 IST
Last Updated 6 ಆಗಸ್ಟ್ 2025, 5:15 IST
ಮಂಗಳವಾರ ಬಸ್ ಸಂಚಾರ ಆರಂಭಗೊಂಡ ನಂತರ ಪ್ರಯಾಣಿಕರು ಬೀದರ್ ಕೇಂದ್ರ ಬಸ್ ನಿಲ್ದಾಣಕ್ಕೆ‌ ಬಂದ
ಮಂಗಳವಾರ ಬಸ್ ಸಂಚಾರ ಆರಂಭಗೊಂಡ ನಂತರ ಪ್ರಯಾಣಿಕರು ಬೀದರ್ ಕೇಂದ್ರ ಬಸ್ ನಿಲ್ದಾಣಕ್ಕೆ‌ ಬಂದ   

ಬೀದರ್: ವೇತನ ಪರಿಷ್ಕರಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬೀದರ್ ವಿಭಾಗದ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದ ಪರಿಣಾಮ ಮಂಗಳವಾರ ಪ್ರಯಾಣಿಕರು ತೀವ್ರ ಪರದಾಟ ನಡೆಸಿದರು.

ವಿವಿಧ ಕಡೆ ಪ್ರಯಾಣ ಬೆಳೆಸಲು ಬಸ್ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರಿಗೆ ವಿಷಯ ತಿಳಿದು ಸಮಸ್ಯೆಗೀಡಾದರು. ದೂರದ ಊರುಗಳಿಗೆ ಪ್ರಯಾಣ ಬೆಳೆಸಬೇಕಾದವರು ಮನೆ ಕಡೆಗೆ ಹಿಂತಿರುಗಿದರೆ, ಜಿಲ್ಲೆಯ ವಿವಿಧ ಭಾಗಗಳ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ತೆರಳಿದರು.

ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಿಂದಲೇ ಕ್ರೂಸರ್, ಟಂಟಂ ಸೇರಿದಂತೆ ಇತರೆ ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ‌ ಸಂಚರಿಸಿದವು. ಅಲ್ಲಿಂದಲೇ, ಪ್ರಯಾಣಿಕರು ವಿವಿಧ ಕಡೆಗಳಿಗೆ ಸಂಚರಿಸಿದರು.

ADVERTISEMENT

ಬೀದರ್ ಕೇಂದ್ರ ಬಸ್ ನಿಲ್ದಾಣದಿಂದ ನಿತ್ಯ 680 ಬಸ್‌ಗಳು ನಿತ್ಯ 620 ಮಾರ್ಗಗಳಲ್ಲಿ ಸಂಚರಿಸುತ್ತವೆ. ಮಂಗಳವಾರ ಒಂದೂ ಬಸ್ ಕೂಡ ರಸ್ತೆಗೆ ಇಳಿಯಲಿಲ್ಲ. ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹಾಗೂ ದೈನಂದಿನ ಕೆಲಸಗಳಿಗೆ ಹೋಗಬೇಕಾದವರು ತೀವ್ರ ಪರದಾಟ ನಡೆಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರದ ಸಾರಿಗೆ ಸಂಸ್ಥೆ ಬಸ್‌ಗಳು ಜಿಲ್ಲೆಯ ಗಡಿಭಾಗದವರೆಗೆ ಮಾತ್ರ ಸಂಚರಿಸಿದವು. ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ‌ ಹಳೆ ಬಸ್ ನಿಲ್ದಾಣಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಲಿಲ್ಲ.

ತೆಲಂಗಾಣದ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ ಜನ
ಪ್ರಯಾಣಿಕರೊಬ್ಬರು ತಲೆ ಮೇಲೆ ಮೂಟೆ ಹೊತ್ತು ಸಾಗಿದರು

ಹೆಚ್ಚಿನ ಹಣ ವಸೂಲಿ

ಭಾಲ್ಕಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಿಬ್ಬಂದಿ ಮಂಗಳವಾರ ಮುಷ್ಕರ ನಡೆಸಿದ ಕಾರಣ ಬಸ್‌ ಇಲ್ಲದೆ ವಿವಿಧೆಡೆ ತೆರಳಬೇಕಾಗಿದ್ದ ಪ್ರಯಾಣಿಕರು ಪರದಾಡಿದರು.

ಸೋಮವಾರ ರಾತ್ರಿಯೇ ಮುಷ್ಕರದ ಮಾಹಿತಿ ಅನೇಕರಿಗೆ ದೊರೆತ ಕಾರಣ ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಅನೇಕರು ತಮ್ಮ ದಿನನಿತ್ಯದ ಕೆಲಸ–ಕಾರ್ಯಗಳಿಗಾಗಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಅವಲಂಬಿಸಿದ್ದರು.

ಸ್ವಂತ ವಾಹನ ಇಲ್ಲದ ಪ್ರಯಾಣಿಕರು ವಿವಿಧಡೆಗೆ ತೆರಳಲು ಕ್ರೂಸರ್‌ನವರಿಗೆ ಹೆಚ್ಚಿನ ಹಣ ಪಾವತಿಸಿ ತೆರಳುತ್ತಿದ್ದ ದೃಶ್ಯ ಕಂಡು ಬಂತು.

‘ನಮ್ಮ ಬಸ್ ಡಿಪೋದಲ್ಲಿ ಎಂಟು ಜನ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಹಾಗಾಗಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉದಗೀರ್, ಹುಲಸೂರ, ಬೀದರ್, ಬಸವಕಲ್ಯಾಣ ಮಾರ್ಗದಲ್ಲಿ ನಾಲ್ಕು ಬಸ್‌ಗಳನ್ನು ಸಂಚಾರಕ್ಕೆ ಓಡಿಸಲಾಯಿತು. ಮುಷ್ಕರದಿಂದಾಗಿ ನಮ್ಮ ಡಿಪೋದಿಂದ ಸಂಗ್ರಹವಾಗುತ್ತಿದ್ದ ಸುಮಾರು ಹದಿನಾಲ್ಕು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ’ ಎಂದು ಬಸ್ ಡಿಪೋದ ವ್ಯವಸ್ಥಾಪಕ ಭದ್ರಪ್ಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಕೋ ಎಂದ ರಸ್ತೆಗಳು

ಕಮಲನಗರ: ಸಾರಿಗೆ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಕಮಲನಗರ ತಾಲ್ಲೂಕಿನಾದ್ಯಂತ ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲಿ ನಿಂತು ಪರದಾಡಬೇಕಾಯಿತು.

ಮಂಗಳವಾರ ಬೆಳಿಗ್ಗೆ ಉದಗೀರ್, ದೇವಣಿ, ನೀಲಂಗಾ, ಲಾತೂರ್ ಮತ್ತು ಹೈದರಾಬಾದ್, ನಾಂದೇಡ್ ನಗರಗಳಿಗೆ ತೆರಳುವ ಪ್ರಯಾಣಿಕರಿಗೆ ಮುಷ್ಕರದ ಮಾಹಿತಿ ಇಲ್ಲದ ಕಾರಣ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಕಾಯಬೇಕಾಯಿತು.

ದೂರದ ಗ್ರಾಮಗಳಿಗೆ ತೆರಳುವ ಪ್ರಯಾಣಿಕರು ಕ್ರೂಸರ್, ಟಂಟಂ ಮತ್ತು ಆಟೋದವರು ಕೇಳಿದಷ್ಟು ಹಣ ನೀಡಿ ಭಾಲ್ಕಿ, ಬೀದರ್, ಔರಾದ್ ಹಾಗೂ ಉದಗೀರ್ ಕಡೆ ಪ್ರಯಾಣಿಸಿದರು.

ಖಾಸಗಿ ವಾಹನಗಳು ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುವುದು ರಸ್ತೆಯಲ್ಲಿ ಸಾಮಾನ್ಯವಾಗಿತ್ತು. ಗ್ರಾಮಾಂತರ ಭಾಗದಲ್ಲಿ ಸಮರ್ಪಕ ಸೇವೆ ದೊರಕದೆ ಇರುವುದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಪರದಾಟ

ಕಾದು ಕುಳಿತ ಜನ

ಹುಲಸೂರ: ಸಾರಿಗೆ ಸಿಬ್ಬಂದಿ ಮುಷ್ಕರದ ಕಾರಣ ಬಸ್‌ಗಳಿಲ್ಲದೆ ತಾಲ್ಲೂಕಿನಲ್ಲಿ ಜನರು ಪರದಾಡಿದರು.

ಪಟ್ಟಣದ ಮಿನಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮುಷ್ಕರದ ಅರಿವಿಲ್ಲದೆ ಪಟ್ಟಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗಾಗಿ ಕಾದು ಕುಳಿತಿದ್ದರು. ಹಲವು ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ತೆರಳಿದರು.

‘ಖಾಸಗಿ ವಾಹನಗಳವರು ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ’ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಸಂಜೆ ಸಂಚಾರ ಪುನರಾರಂಭ

ಬೆಳಿಗ್ಗೆಯಿಂದ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಮಂಗಳವಾರ ಸಂಜೆ ಪುನರಾರಂಭಗೊಂಡಿತು.

ವಿಷಯ ತಿಳಿದು ಜನ ಬಸ್ ನಿಲ್ದಾಣದ ಕಡೆಗೆ ಧಾವಿಸಿದರು. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಒಂದೊಂದಾಗಿ ಬಸ್‌ಗಳನ್ನು ಬಿಡಲಾಯಿತು.

ಬೀದರ್ ಬಸ್ ನಿಲ್ದಾಣದಿಂದ ಖಾಸಗಿ ವಾಹನಗಳು ಸಂಚಾರ ಬೆಳೆಸಿದವು
ಬೀದರ್ ಕೇಂದ್ರ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಮಂಗಳವಾರ ಮಧ್ಯಾಹ್ನ ಬಿಕೋ ಎನ್ನುತ್ತಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.