ADVERTISEMENT

ಸಾಮಾಜಿಕ ಬದ್ಧತೆ ಸಾಹಿತ್ಯ ರಚನೆಯಾಗಲಿ

ಪಶು ವಿಶ್ವವಿದ್ಯಾಲಯದ ಪ್ರೊ.ಎಚ್.ಡಿ. ನಾರಾಯಣಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 15:52 IST
Last Updated 13 ಡಿಸೆಂಬರ್ 2018, 15:52 IST
ಬೀದರ್‌ನಲ್ಲಿ ಗುರುವಾರ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಡಿ ನಾರಾಯಣಸ್ವಾಮಿ ಅವರು ಕವಿ ಎಸ್.ಬಿ. ಕುಚಬಾಳ ಅವರ ‘ತಿಳಿದು ನಡಿರಿ ಇನ್ನ’ ಕವನ ಸಂಕಲನ ಬಿಡುಗಡೆ ಮಾಡಿದರು. ರಾಜಕುಮಾರ ಹೆಬ್ಬಾಳೆ, ವಿಜಯಕುಮಾರ ಸೋನಾರೆ, ಜಗನ್ನಾಥ ಹೆಬ್ಬಾಳೆ, ಮಹಾಂತೇಶ ಬೀಳಗಿ, ಎಸ್.ಬಿ.ಕುಚಬಾಳ್, ರಾಜಶೇಖರ ಸ್ವಾಮೀಜಿ , ಜಯದೇವಿ ಗಾಯಕವಾಡ, ಎಸ್‌.ಬಿ.ಬಿರಾದಾರ್ ಹಾಗೂ ಧನಲಕ್ಷ್ಮಿ ಪಾಟೀಲ ಇದ್ದಾರೆ
ಬೀದರ್‌ನಲ್ಲಿ ಗುರುವಾರ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಡಿ ನಾರಾಯಣಸ್ವಾಮಿ ಅವರು ಕವಿ ಎಸ್.ಬಿ. ಕುಚಬಾಳ ಅವರ ‘ತಿಳಿದು ನಡಿರಿ ಇನ್ನ’ ಕವನ ಸಂಕಲನ ಬಿಡುಗಡೆ ಮಾಡಿದರು. ರಾಜಕುಮಾರ ಹೆಬ್ಬಾಳೆ, ವಿಜಯಕುಮಾರ ಸೋನಾರೆ, ಜಗನ್ನಾಥ ಹೆಬ್ಬಾಳೆ, ಮಹಾಂತೇಶ ಬೀಳಗಿ, ಎಸ್.ಬಿ.ಕುಚಬಾಳ್, ರಾಜಶೇಖರ ಸ್ವಾಮೀಜಿ , ಜಯದೇವಿ ಗಾಯಕವಾಡ, ಎಸ್‌.ಬಿ.ಬಿರಾದಾರ್ ಹಾಗೂ ಧನಲಕ್ಷ್ಮಿ ಪಾಟೀಲ ಇದ್ದಾರೆ   

ಬೀದರ್‌: ‘ಅನುಭವಗಳನ್ನು ಅಕ್ಷರ ರೂಪದಲ್ಲಿ ಇಳಿಸುವುದರಿಂದ ಅದು ಗಟ್ಟಿ ಸಾಹಿತ್ಯದ ರೂಪ ಪಡೆದುಕೊಳ್ಳುತ್ತದೆ.
ಪ್ರತಿಯೊಬ್ಬರು ಬಾಲ್ಯದಿಂದಲೇ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು. ಸಾಮಾಜಿಕ ಬದ್ಧತೆಯ ಸಾಹಿತ್ಯ ರಚಿಸಬೇಕು’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಡಿ. ನಾರಾಯಣಸ್ವಾಮಿ ಹೇಳಿದರು.

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಗುರುವಾರ ಕವಿ ಎಸ್.ಬಿ ಕುಚಬಾಳ್‌ ರಚಿತ ‘ತಿಳಿದು ನಡಿರಿ ಇನ್ನ’ ಕವನ ಸಂಕಲನ ಬಿಡುಗಡೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಜನಪದ ಕಲೆ ಹಾಗೂ ಸಾಹಿತ್ಯ ಸಂರಕ್ಷಣೆ ಅಗತ್ಯ’ ಎಂದರು.

‘ಜಾತಿ, ಪಂಥ ಹಾಗೂ ಪಂಗಡದ ಭೇದವನ್ನು ಬದಿಗಿರಿಸಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಇಂದು ಸಾಹಿತ್ಯದ ತುಣುಕುಗಳು ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿವೆ. ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ ದಿಸೆಯಲ್ಲಿ ಯುವ ಸಾಹಿತಿಗಳು ಕಾರ್ಯ ಪ್ರವೃತ್ತರಾಗಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಮಾತನಾಡಿ, ‘ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಜೀವಿಸಬೇಕು. ಒಂದಲ್ಲೊಂದು ಕಲೆ ಕರಗತ ಮಾಡಿಕೊಂಡಲ್ಲಿ ಸಮಾಜಮುಖಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಪುಸ್ತಕ ಪರಿಚಯಿಸಿದ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯೆ ಜಯದೇವಿ ಗಾಯಕವಾಡ ಮಾತನಾಡಿ,‘ಕರ್ನಾಟಕ ಪುಸ್ತಕ ಪ್ರಾಧಿಕಾರಕ್ಕೆ ದಲಿತ ಸಾಹಿತ್ಯ ಯೋಜನೆಯಡಿ ಕುಚಬಾಳ ಅವರ ‘ತಿಳಿದು ನಡಿರಿ ಇನ್ನ’ ಹಾಗೂ ಈಶ್ವರ ತಡೋಳಾ ಅವರ ‘ಸಮತೆಯ ಹಾಡು’ ಪುಸ್ತಕ ಸೇರಿ 50 ಪುಸ್ತಕಗಳು ಆಯ್ಕೆಯಾಗಿವೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಸ್ಕೃತಿ ಸಚಿವಾಲಯದ ವೇತನ ಯೋಜನೆ ತಜ್ಞ ಸಮಿತಿ ಸದಸ್ಯ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ‘ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ರಾಜಶೇಖರ ಸ್ವಾಮೀಜಿ ಗೊರಟಾ, ‘ಕುಚಬಾಳ ಬರೆದ ತತ್ವಾಧಾರಿತ ಕವನ ಸಂಕಲನದಲ್ಲಿನ ಪದಗಳು ಭಜನೆ ರೂಪದಲ್ಲಿ ಪ್ರಚಾರಗೊಳ್ಳಬೇಕು’ ಎಂದು ಹೇಳಿದರು.

ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು.

ಕವಿ ಎಸ್.ಬಿ ಕುಚಬಾಳ್‌, ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯೆ ಲುಂಬಿಣಿ ಗೌತಮ, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ. ಬಿರಾದಾರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕರ್ನಾಟಕ ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಡಾ.ಧನಲಕ್ಷ್ಮಿ ಪಾಟೀಲ ಇದ್ದರು.

ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಸುನೀತಾ ಕೂಡ್ಲಿಕರ್ ನಿರೂಪಿಸಿದರು. ಪ್ರಕಾಶ ಕನ್ನಾಳೆ ವಂದಿಸಿದರು. ನವದೆಹಲಿಯ ಅಖಿಲ ಭಾರತ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.