
ಹುಮನಾಬಾದ್: ‘ಕಾರ್ಮಿಕರ ಕಿಟ್ ವಿತರಣೆಯಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರು ರಾಜಕೀಯ ಮಾಡಿದ ಕಾರಣ 9 ತಿಂಗಳುಗಳ ನಂತರ ಕಿಟ್ ವಿತರಣೆ ಮಾಡುತ್ತಿದ್ದೇವೆ’ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ನಡೆದ ಕಾರ್ಮಿಕರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಡವರು ಮತ್ತು ಕಾರ್ಮಿಕರ ಜೀವನದೊಂದಿಗೆ ಚೆಲ್ಲಾಟ ಆಡುವುದು ಯಾರಿಗೂ ಒಳ್ಳೆಯದಲ್ಲ. ಈಚೆಗೆ ಶಾಸಕರ ಭವನದಲ್ಲಿ ಸಾಂಕೇತಿಕವಾಗಿ ಕಿಟ್ ವಿತರಣೆ ಮಾಡಿದ್ದೆ. ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಅವರು ಅಧಿವೇಶನದಲ್ಲಿ ಈ ಕುರಿತು ಪ್ರಶ್ನೆ ಮಾಡಿದ್ದರಿಂದಾಗಿ ಕಿಟ್ ವಿತರಣೆಗೆ ಇಷ್ಟು ದಿನ ಕಾಯಬೇಕಾಯಿತು’ ಎಂದರು.
‘ಶಾಸಕರ ಭವನದಲ್ಲಿ ವಿತರಣೆ ಮಾಡಿದರೆ ಏನು ತಪ್ಪು?. ಅದು ಸಹ ಸರ್ಕಾರಿ ಕಟ್ಟಡವೇ ಹೊರತು, ನನ್ನ ಸ್ವಂತ ಮನೆಯಲ್ಲ. ಇಲ್ಲಿ ಇಬ್ಬರು ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಬರೀ ಶಿಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಆದರೆ, ಇಂದಿನ ಕಾರ್ಯಕ್ರಮಕ್ಕೆ ಒಬ್ಬರೂ ಬಂದಿಲ್ಲ. ಕಾರ್ಮಿಕರಿಗೆ ಕಿಟ್ ನೀಡಿದರೆ ಇವರಿಗೆ ಬಾರಿ ಹೊಟ್ಟೆ ಕಿಚ್ಚು’ ಎಂದು ಹೇಳಿದರು.
‘ಕಾರ್ಮಿಕ ಇಲಾಖೆಯ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ಅಧಿಕಾರಿಗಳು ಮಾಡಬೇಕು. ಬಹುತೇಕ ಕಾರ್ಮಿಕರಿಗೆ ಇಲಾಖೆ ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಅವರು ಹೇಗೆ ಸೌಲಭ್ಯ ಪಡೆಯಲು ಸಾಧ್ಯ’ ಎಂದರು.
‘ಅಧಿಕಾರಿ ಮತ್ತು ಕಾರ್ಮಿಕ ಸಂಘಟನೆ ಪ್ರಮುಖರು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕಾರ್ಮಿಕರಿಗೆ ಏನಾದರೂ ಸಮಸ್ಯೆಗಳು ಎದುರಾದಾಗ ಸಂಘಟನೆ ಅವರು ಕಷ್ಟಕ್ಕೆ ಸ್ಪಂದಿಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಕಾರ್ಮಿಕ ಇಲಾಖೆಯ ಉಪವಿಭಾಗಾಧಿಕಾರಿ ಮಹೇಶ್ ಲಕ್ಷ್ಮಣ್ ಕುಳಗಿ ಮಾತನಾಡಿ,‘ಹುಮನಾಬಾದ್ ಮತ್ತು ಚಿಟಗುಪ್ಪ ತಾಲ್ಲೂಕಿನ 67 ಜನ ಕಾರ್ಮಿಕರಿಗೆ ವಿವಿಧ ರೀತಿಯ ಕಿಟ್ ವಿತರಣೆ ಮಾಡಲಾಗಿದೆ. ಕಾರ್ಮಿಕರು ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಮಿಕ ಅಧಿಕಾರಿ ಗಂಗಾಧರ ನೀಲೂರೆ, ಲಕ್ಷ್ಮಣ, ಬಸವರಾಜ ಮಾಳಗೆ, ಗೌಸೋದ್ದಿನ್, ಶಶಿ ಡಾಂಗೆ, ಶ್ರೀಮಂತ, ಈಶ್ವರ, ಬಸವರಾಜ ನಿರ್ಣಾ, ಲಾಲಪ್ಪ ನಿರ್ಣಾ, ನಾಗಭೂಷಣ ಸಂಗಮ್, ಪಪ್ಪುರಾಜ್ ಚತುರೆ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.