ADVERTISEMENT

ಖಾಸಗಿ ವಾಹನಗಳಿದ್ದರೂ ಪ್ರಯಾಣಿಕರ ಕೊರತೆ

ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 14:24 IST
Last Updated 10 ಏಪ್ರಿಲ್ 2021, 14:24 IST
ಸಾರಿಗೆ ನೌಕರರ ಮುಷ್ಕರದ ಕಾರಣ ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದ ‍ಪ್ಲಾಟ್‌ ಫಾರ್ಮ್‌ಗಳಲ್ಲಿ ಕ್ರೂಸರ್‌ಗಳು ನಿಲುಗಡೆಯಾಗಿದ್ದವು
ಸಾರಿಗೆ ನೌಕರರ ಮುಷ್ಕರದ ಕಾರಣ ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದ ‍ಪ್ಲಾಟ್‌ ಫಾರ್ಮ್‌ಗಳಲ್ಲಿ ಕ್ರೂಸರ್‌ಗಳು ನಿಲುಗಡೆಯಾಗಿದ್ದವು   

ಬೀದರ್‌: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎನ್‌ಇಕೆಆರ್‌ಟಿಸಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮುಕ್ತ ಅವಕಾಶ ಕಲ್ಪಿಸಿದ್ದರಿಂದ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳೇ ತುಂಬಿಕೊಂಡಿದ್ದವು.

ಬೀದರ್, ಉದಗಿರ, ಜಹೀರಾಬಾದ್ ಹಾಗೂ ಹೈದರಾಬಾದ್‌ ಮಧ್ಯೆ ತೆಲಂಗಾಣದ ಸಾರಿಗೆ ಬಸ್‌ಗಳೇ ಅಧಿಕ ಸಂಖ್ಯೆಯಲ್ಲಿ ಸಂಚರಿಸಿದವು. ಮಹಾರಾಷ್ಟ್ರ ಸಾರಿಗೆ ಬಸ್‌ಗಳು ಬಸವಕಲ್ಯಾಣ, ಕಮಲನಗರ, ಔರಾದ್ ಹಾಗೂ ಹುಮನಾಬಾದ್‌ ವರೆಗೂ ಬಂದು ಹೋದವು.

ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ ನಿಲ್ದಾಣಗಳಲ್ಲಿ ಯಾವ ಮಾರ್ಗಗಳಲ್ಲಿ ಬಸ್‌ ಸಂಚರಿಸುತ್ತವೆಯೋ ಅದೇ ಪ್ಲಾಟ್‌ ಫಾರ್ಮ್‌ಗಳಲ್ಲಿ ಕ್ರೂಸರ್‌ಗಳನ್ನು ನಿಲುಗಡೆ ಮಾಡಲಾಗಿತ್ತು. ಬಸ್‌ ನಿಲ್ದಾಣಗಳಲ್ಲಿನ ಮಾರಾಟ ಮಳಿಗೆಗಳು ತೆರೆದುಕೊಂಡಿದ್ದವು.

ADVERTISEMENT

‘ಬೀದರ್‌ ವಿಭಾಗದಲ್ಲಿರುವ 14 ಮಂದಿ ಟ್ರೈನಿ ನೌಕರರ ಪೈಕಿ ಐವರು ಶನಿವಾರ ಕರ್ತವ್ಯದ ಮೇಲೆ ಹಾಜರಾಗಿದ್ದಾರೆ. 20 ಬಸ್‌ಗಳು ಹೈದರಾಬಾದ್ ಸೇರಿದಂತೆ ದೂರದ ಪಟ್ಟಣಗಳಿಗೆ ಹೋಗಿ ಬಂದಿವೆ. ಸಾರಿಗೆ ನೌಕರರು ನಿಧಾನವಾಗಿ ಕೆಲಸಕ್ಕೆ ಬರುತ್ತಿದ್ದಾರೆ. ಎರಡು, ಮೂರು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ’ ಎಂದು ಎನ್‌ಇಕೆಆರ್‌ಟಿಸಿ ಬೀದರ್‌ ವಿಭಾಗೀಯ ಸಂಚಾಲಕ ಚಂದ್ರಕಾಂತ ಫುಲೇಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.