ADVERTISEMENT

ಹೊಸ ಹೊಸ ಸಂಗತಿ ಅರಿಯಿರಿ

ಪ್ರೌಢಶಾಲಾ ಶಿಕ್ಷಕರ ಕಾರ್ಯಾಗಾರ ಸಮಾರೋಪದಲ್ಲಿ ಶಿವಲಿಂಗ ಹೇಡೆ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 15:15 IST
Last Updated 25 ಸೆಪ್ಟೆಂಬರ್ 2021, 15:15 IST
ಬೀದರ್‌ನ ನೌಬಾದ್‍ನ ಡಯಟ್‍ನಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ರಾಜ್ಯಮಟ್ಟದ ಉತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವಲಿಂಗ ಹೇಡೆ ಅವರನ್ನು ಸನ್ಮಾನಿಸಲಾಯಿತು. ಗುರುನಾಥ ರಾಜಗೀರಾ, ಗೋವಿಂದ ರೆಡ್ಡಿ, ರೇವಣಸಿದ್ದಪ್ಪ ಜಲಾದೆ, ಸಂದೀಪ್, ಬಿ.ಕೆ. ದಿಗಂಬರ, ಮಂಜುನಾಥ, ಸಂತೋಷ ಪೂಜಾರಿ, ವಿನೋದ ಪಾಟೀಲ ಇದ್ದರು
ಬೀದರ್‌ನ ನೌಬಾದ್‍ನ ಡಯಟ್‍ನಲ್ಲಿ ನಡೆದ ಪ್ರೌಢಶಾಲಾ ಶಿಕ್ಷಕರ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ರಾಜ್ಯಮಟ್ಟದ ಉತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವಲಿಂಗ ಹೇಡೆ ಅವರನ್ನು ಸನ್ಮಾನಿಸಲಾಯಿತು. ಗುರುನಾಥ ರಾಜಗೀರಾ, ಗೋವಿಂದ ರೆಡ್ಡಿ, ರೇವಣಸಿದ್ದಪ್ಪ ಜಲಾದೆ, ಸಂದೀಪ್, ಬಿ.ಕೆ. ದಿಗಂಬರ, ಮಂಜುನಾಥ, ಸಂತೋಷ ಪೂಜಾರಿ, ವಿನೋದ ಪಾಟೀಲ ಇದ್ದರು   

ಬೀದರ್: ಕಲಿಕೆ ನಿರಂತರ ಪ್ರಕ್ರಿಯೆ ಆಗಿದೆ. ಹೊಸ ಹೊಸ ಸಂಗತಿಗಳನ್ನು ಅರಿಯಲು ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು ಎಂದು ರಾಜ್ಯಮಟ್ಟದ ಉತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವಲಿಂಗ ಹೇಡೆ ಸಲಹೆ ನೀಡಿದರು.

ನಗರದ ನೌಬಾದ್‍ನ ಡಯಟ್‍ನಲ್ಲಿ ನಡೆದ ಸೃಜನಾತ್ಮಕ ಬೋಧನೆ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಪ್ರೌಢಶಾಲಾ ಶಿಕ್ಷಕರ 12 ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಅಧ್ಯಯನ, ಬೋಧನೆ ಆಸಕ್ತಿ ಹಾಗೂ ಒಳ್ಳೆಯ ನಡತೆ ಶಿಕ್ಷಕರನ್ನು ಆದರ್ಶ ಶಿಕ್ಷಕರನ್ನಾಗಿಸುತ್ತವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸವಾಲುಗಳನ್ನು ಸ್ವೀಕರಿಸಿ, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ
ಹೊಣೆಗಾರಿಕೆ ಶಿಕ್ಷಕರ ಮೇಲೆ ಇದೆ ಎಂದು ತಿಳಿಸಿದರು.

ADVERTISEMENT

ಶಿಕ್ಷಕ ವೃತ್ತಿಗಿಂತ ಪವಿತ್ರವಾದ ವೃತ್ತಿ ಮತ್ತೊಂದಿಲ್ಲ. ಶಿಕ್ಷಕರು ಮಕ್ಕಳ ಕುತೂಹಲ ಕೆರಳಿಸುವ ಹಾಗೆ ಬೋಧನೆ ಮಾಡಬೇಕು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಸೃಜನಾತ್ಮಕ ಬೋಧನೆ ಹಾಗೂ ಹೊಸ ಶಿಕ್ಷಣ ನೀತಿ ಕುರಿತು ಪ್ರೌಢಶಾಲಾ ಶಿಕ್ಷಕರಿಗೆ ಬರುವ ದಿನಗಳಲ್ಲಿ ತಾಲ್ಲೂಕುಮಟ್ಟದಲ್ಲೂ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ಹೇಳಿದರು.

ಸಂಘವು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ವಿಕಾಸಕ್ಕೆ ಸಂಕಲ್ಪ ತೊಟ್ಟಿದೆ. ಅದನ್ನು ಸಾಕಾರಗೊಳಿಸುವ ದಿಸೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಅನೇಕ ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಡಯಟ್ ಪ್ರಾಚಾರ್ಯ ಬಿ.ಕೆ. ದಿಗಂಬರ ಅಧ್ಯಕ್ಷತೆ ವಹಿಸಿದ್ದರು. ಆ್ಯಕ್ಟ್ ಸಂಸ್ಥೆಯ ತರಬೇತುದಾರರಾದ ಸಂದೀಪ್, ವಿಶ್ವನಾಥ, ಎಂ.ಡಿ. ಜಾಫರ್, ಮಂಜುನಾಥ, ನೋಡಲ್ ಅಧಿಕಾರಿ ಸಂತೋಷ ಪೂಜಾರಿ, ವಿನೋದ ಪಾಟೀಲ ಇದ್ದರು.

ಸಂಘದ ತಾಲ್ಲೂಕು ಸಂಯೋಜಕ ಗುರುನಾಥ ರಾಜಗೀರಾ ಸ್ವಾಗತಿಸಿದರು. ಡಯಟ್ ಉಪನ್ಯಾಸಕ ಗೋವಿಂದರೆಡ್ಡಿ ನಿರೂಪಿಸಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಮತ್ತು ಬೆಂಗಳೂರಿನ ಆ್ಯಕ್ಟ್ ಸಂಸ್ಥೆ ವತಿಯಿಂದ ನಡೆದ ಕಾರ್ಯಾಗಾರದಲ್ಲಿ ಜಿಲ್ಲೆಯ 184 ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.