ಔರಾದ್: ‘ಭಾರತದ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಅವರು ಜಗತ್ತು ಕಂಡ ಶ್ರೇಷ್ಠ ಚಿಂತಕರು’ ಎಂದು ಚಿಂತಕ ಜಗದೀಶ್ವರ ಬಿರಾದಾರ ಹೇಳಿದರು.
ಡಾ. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಹಾಗೂ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪಂಗಡ ನೌಕರರ ಸಮನ್ವಯ ಸಮಿತಿ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಧಕರ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ರಾಷ್ಟ್ರದ ಕಾನೂನಿಗೆ ಅಡಿಪಾಯವಾಗಿದ್ದು, ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಜೆಗಳಿಗೆ ಸಂವಿಧಾನದಡಿ ನೀಡಿರುವ ಹಕ್ಕು ಪಡೆಯಲು ತೋರುವಷ್ಟೇ ಆಸಕ್ತಿ ಕರ್ತವ್ಯಗಳ ನಿರ್ವಹಣೆಗೂ ನೀಡಬೇಕು ಎಂದರು.
‘ಅಸ್ಪೃಶ್ಯತೆ, ಅಸಮಾನತೆ, ಅವೈಜ್ಞಾನಿಕ ಸಂಪ್ರದಾಯಗಳನ್ನು ವಿರೋಧಿಸಿ, ದಿನ ದಲಿತರ ಧ್ವನಿಯಾದ ಅವರ ವಿಚಾರಗಳು ನಮಗೆ ಸದಾ ಆದರ್ಶ’ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪಂಗಡ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ರಾಜಕುಮಾರ ಡೊಂಗರೆ ಮಾತನಾಡಿ, ‘ಶೋಷಿತರ, ದಮನಿತರ ಏಳಿಗೆಗಾಗಿ ಅಂಬೇಡ್ಕರ್ ತತ್ವಗಳ ಅಳವಡಿಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಚಿಂತನೆಗಳು ಹಾಗೂ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಪಡೆದು ಕರ್ತವ್ಯಗಳನ್ನು ಸಹ ಪರಿಣಾಮಕಾರಿಯಾಗಿ ನಿರ್ವಹಿಸಿ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಪಿಯುಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಭಂತೆ ಬೋಧಿರತ್ನ ಸಾನ್ನಿಧ್ಯ ವಹಿಸಿದ್ದರು. ತಾ.ಪಂ ಇಒ ವೆಂಕಟರಾವ ಸಿಂಧೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನೀಲಕುಮಾರ ಮೇಲ್ದೊಡ್ಡಿ, ಸಾಹಿತಿ ಮನ್ಮತ ಡೋಳೆ, ವೀರಶೆಟ್ಟಿ ರಾಠೋಡ, ರವೀಂದ್ರ ಮೇತ್ರೆ, ಪಿಎಸ್ಐ ಉಪೇಂದ್ರ ಕುಮಾರ, ನರಸಿಂಗ ಕೊಂಡೆ, ಆನಂದ ಕಾಂಬಳೆ, ಸೂರ್ಯಕಾಂತ ಸಿಂಗೆ, ಪಂಡರಿ ಆಡೆ, ವಿಶ್ವನಾಥ ಬಿರಾದಾರ, ತುಳಸಿರಾಮ ಬೇಂದ್ರೆ, ಮಹಾದೇವ ಚಿಟಗೀರೆ, ಬಿಎಂ ಅಮರವಾಡಿ, ಪ್ರಕಾಶ ಭಂಗಾರೆ, ಸುನೀಲ ಮಿತ್ರಾ, ಆದರ್ಶ ನಾಗೂರೆ, ಸೈದಪ್ಪ, ಧನರಾಜ ಮಾನೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.