ADVERTISEMENT

ಬೀದರ್‌: ಮಾಂಜ್ರಾ ನದಿ ದಡದಲ್ಲಿ ಡ್ರೋಣ್ ಬಳಸಿ ಚಿರತೆ ಹುಡುಕಾಟ

ಎರಡು ತಂಡಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಶೋಧ ಕಾರ್ಯಾಚರಣೆ

ಚಂದ್ರಕಾಂತ ಮಸಾನಿ
Published 12 ಏಪ್ರಿಲ್ 2022, 15:55 IST
Last Updated 12 ಏಪ್ರಿಲ್ 2022, 15:55 IST
ಬೀದರ್‌ ತಾಲ್ಲೂಕಿನ ಜನವಾಡದ ಪಂಪ್‌ಹೌಸ್‌ ಬಳಿ ಚಿರತೆ ಸೆರೆ ಹಿಡಿಯಲು ಬೋನ್‌ ಇಡಲಾಗಿದೆ
ಬೀದರ್‌ ತಾಲ್ಲೂಕಿನ ಜನವಾಡದ ಪಂಪ್‌ಹೌಸ್‌ ಬಳಿ ಚಿರತೆ ಸೆರೆ ಹಿಡಿಯಲು ಬೋನ್‌ ಇಡಲಾಗಿದೆ   

ಬೀದರ್‌: ತಾಲ್ಲೂಕಿನ ಜನವಾಡ ಸಮೀಪ ಮಾಂಜ್ರಾ ನದಿ ದಡಲ್ಲಿರುವ ಹಳೆ ಪಂಪ್‌ಹೌಸ್‌ ಬಳಿ ಚಿರತೆ ಕಾಣಿಸಿಕೊಂಡ ನಂತರ ಬೀದರ್‌ ಹಾಗೂ ಔರಾದ್ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಭೀತಿ ಆವರಿಸಿದೆ.

ಒಂದು ವಾರದಿಂದ ಜನವಾಡ ಪರಿಸರದಲ್ಲಿ ಓಡಾಡುತ್ತಿರುವ ಚಿರತೆ ಸುತ್ತಮುತ್ತಲಿನ ಗ್ರಾಮಗಳ ಜನರ ಎದೆ ಬಡಿತ ಹೆಚ್ಚಿಸಿದೆ. ಕಳೆದ ವಾರ ಗುರುದ್ವಾರ ಹಿಂಬದಿಯಿಂದ ಚಿಕ್ಕಪೇಟೆ ಕಡೆಗೆ ಹೋಗುವ ದಾರಿಯಲ್ಲಿ ಲಾವಣ್ಯ ಫಂಕ್ಷನ್‌ ಹಾಲ್‌ ಬಳಿಯೂ ಬಂದು ಹೋಗಿದೆ. ಮಿಂಚಿನಂತೆ ಬಂದು ಮಾಯವಾದ ಚಿರತೆಯನ್ನು ನೋಡಿದ ವ್ಯಕ್ತಿಗಳು ತಮ್ಮ ಗೆಳೆಯರ ಬಳಿ ಹೇಳಿಕೊಂಡಾಗ ಎಲ್ಲರೂ ಅಪಹಾಸ್ಯ ಮಾಡಿದ್ದಾರೆ.

ಏಪ್ರಿಲ್ 8ರಂದು ಪತ್ರಕರ್ತ ಸಂಜೀವಕುಮಾರ ಬುಕ್ಕಾ ಅವರ ಮೇಲೆ ದಾಳಿ ಮಾಡಿದ ಮೇಲೂ ಯಾರೂ ನಂಬಿರಲಿಲ್ಲ. ದಾಂಡೇಲಿಯ ಅರಣ್ಯ ಅಧಿಕಾರಿಗಳ ಸಲಹೆ ನಂತರ ಅಳವಡಿಸಲಾದ ಕ್ಯಾಮೆರಾದಲ್ಲಿ ಚಿರತೆ ಚಿತ್ರ ಸೆರೆಯಾಗಿದೆ. ದಾಳಿಯ ನಂತರ ಚಿರತೆ ಮತ್ತೆ ಪ್ರತ್ಯೇಕ್ಷವಾಗಿ ಕಾಣಿಸಿಕೊಂಡಿಲ್ಲ.

ADVERTISEMENT

ಕಲಬುರಗಿ ಜಿಲ್ಲೆಯ ಚಿಂಚೋಳಿ ಅರಣ್ಯ ಪ್ರದೇಶದಲ್ಲಿ ಚಿರತೆಗಳಿವೆ. ಅಲ್ಲಿ ಅವುಗಳಿಗೆ ಆಹಾರದ ಕೊರತೆ ಇಲ್ಲ. ಚಿರತೆಗಳು ನಿತ್ಯ 40ರಿಂದ 45 ಕಿ.ಮೀ ಸಂಚರಿಸುತ್ತವೆ. ತೆಲಂಗಾಣದಿಂದ ಬೀದರ್ ತಾಲ್ಲೂಕಿನ ಚಿಲ್ಲರ್ಗಿ, ಹಿಪ್ಪಳಗಾಂವ, ಚಾಂಬೋಳ ಮೂಲಕ ನದಿ ದಂಡೆಗುಂಟ ಜನವಾಡಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕು ದಿನಗಳಿಂದ ಚಿರತೆಗಾಗಿ ಶೋಧ ಕಾರ್ಯ ನಡೆದಿದೆ. ಅರಣ್ಯ ಇಲಾಖೆಯ ಎರಡು ತಂಡ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

‘ಡ್ರೋಣ್‌ ಮೂಲಕ ನದಿ ಪಾತ್ರದ ಪೊದೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಬೋಟ್‌ಗಳಲ್ಲಿ ಸಂಚರಿಸಿ ಶೋಧಿಸಲಾಗುತ್ತಿದೆ. ಅರಿವಳಿಕೆ ನೀಡಿ ಅದನ್ನು ಹಿಡಿಯಲು ಬಂದೂಕು ರೆಡಿ ಮಾಡಿಕೊಳ್ಳಲಾಗಿದೆ. ಆದರೆ, ಚಿರತೆ ಕಾಣಿಸಿಕೊಂಡಿಲ್ಲ’ ಎಂದು ಬೀದರ್‌ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶಿವಶಂಕರ ತಿಳಿಸಿದ್ದಾರೆ.

‘ಜನವಾಡದ ಪಂಪ್‌ಹೌಸ್ ಇಳಿ ಬೋನ್‌ನಲ್ಲಿ ನಾಯಿ ಇಡಲಾಗಿದೆ. ನಾಲ್ಕು ದಿನಗಳ ಅವಧಿಯಲ್ಲಿ ಚಿರತೆ ಸಾಕು ಪ್ರಾಣಿ ಅಥವಾ ಕಾಡುಪ್ರಾಣಿಯ ಮೇಲೆ ದಾಳಿ ನಡೆಸಿದ ಕುರುಹುಗಳು ದೊರಕಿಲ್ಲ. ಚಿರತೆ ಪತ್ತೆಯಾಗುವವರೆಗೂ ಶೋಧ ಕಾರ್ಯ ಮುಂದುವರಿಯಲಿದೆ’ ಎಂದು ಬೀದರ್‌ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ ಮೋರೆ ಹೇಳುತ್ತಾರೆ.

ನದಿ ದಂಡೆಯ ಪೊದೆಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಹಾಗೂ ಮಲವಿಸರ್ಜನೆ ಮಾಡಿ ಹೋಗಿರುವ ಕುರುಹುಗಳು ಕಂಡು ಬಂದಿವೆ. ಚಿರತೆ ಕಾಣಿಸಿಕೊಂಡರೆ ತಕ್ಷಣ ಮಾಹಿತಿ ಕೊಡುವಂತೆ ಜನವಾಡ, ಚಾಂಬೋಳ ಹಾಗೂ ಕೌಠಾ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ. ತೆಲಂಗಾಣದ ನಾರಾಯಣಖೇಡ ತಾಲ್ಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.