ADVERTISEMENT

ಬಸವಕಲ್ಯಾಣ: ಹಿಂದುಳಿದ ವರ್ಗದವರಿಗೆ ಬಿಜೆಪಿ ಟಿಕೆಟ್ ನೀಡಲಿ

ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:13 IST
Last Updated 5 ಮಾರ್ಚ್ 2021, 2:13 IST

ಬಸವಕಲ್ಯಾಣ: ‘ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮುಖಂಡರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರ ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧ ಒಕ್ಕೂಟದ ಸದಸ್ಯರು ಬುಧವಾರ ಜಂಟಿ ಪ್ರಕಟಣೆ ಹೊರಡಿಸಿದ್ದು, ‘ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತದಾರರು ಎಲ್ಲರಕ್ಕಿಂತ ಹೆಚ್ಚು ಅಂದರೆ 90 ಸಾವಿರ ಇದ್ದಾರೆ. ಈ ಕಾರಣ ಈ ವರ್ಗಗಳ ಮುಖಂಡರಿಗೆ ಟಿಕೆಟ್ ದೊರೆತರೆ ಗೆಲುವು ನಿಶ್ಚಿತ. ಈ ವರ್ಗಗಳ ಕೆಲವರು ಆಕಾಂಕ್ಷಿಗಳಾಗಿದ್ದು, ಅವರಲ್ಲಿ ಒಬ್ಬರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಿಕೊಡಬೇಕು’ ಎಂದಿದ್ದಾರೆ.

‘ಜಿಲ್ಲೆಯಲ್ಲಿಯೂ ಈ ವರ್ಗಗಳ ಮತದಾರರು ಬಹುಸಂಖ್ಯೆಯಲ್ಲಿ ಇದ್ದಾರೆ. ಆದರೂ ಹಿಂದಿನ 2018ರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಔರಾದ್ ಕ್ಷೇತ್ರವನ್ನು ಹೊರತುಪಡಿಸಿ ಬಸವಕಲ್ಯಾಣ ಒಳಗೊಂಡಂತೆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಈ ವರ್ಗದವರಿಗೆ ಟಿಕೆಟ್ ನೀಡಿರಲಿಲ್ಲ. ಸಾಮಾಜಿಕ ನ್ಯಾಯ ಪಾಲಿಸದ ಕಾರಣ ಈ ವರ್ಗಗಳ ಮತದಾರರು ಮುನಿಸಿಕೊಂಡರು. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದರು. ಆದ್ದರಿಂದ ಪಕ್ಷದ ವರಿಷ್ಠರು ಈ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಬೆಂಬಲ ದೊರೆತಿದ್ದರಿಂದ ಒಂದು ಸಲ ಮಾತ್ರ ಬಿಜೆಪಿ ಗೆದ್ದಿದೆ. ಕಳೆದ ಸಲ ಹಿಂದುಳಿದ ವರ್ಗಗಳ ಮತದಾರರು ಒಗ್ಗೂಡಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರಿಂದ ಈ ವರ್ಗಗಳ ಮುಖಂಡ ಬಿ.ನಾರಾಯಣರಾವ್ ಅವರು ಅತಿ ಹೆಚ್ಚು ಮತಗಳ ಅಂತರದಿಂದ ವಿಜೇತರಾದರು. ಅವರಿಗೆ ದೊರೆತಿದ್ದ ಮತಗಳು ಬಿಜೆಪಿಗೆ ಬರಬೇಕಾದರೆ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟವರಿಗೆ ಟಿಕೆಟ್ ನೀಡುವುದು ಅನಿವಾರ್ಯವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಇರುವ ಕಾರಣ ಇಲ್ಲಿ ಈ ಪಕ್ಷದ ಅಭ್ಯರ್ಥಿ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅನ್ಯ ಪಕ್ಷಗಳ ಭದ್ರಕೋಟೆ ಎಂದೇ ಗುರುತಿಸಲಾಗುವ ಈ ಕ್ಷೇತ್ರದಲ್ಲಿ ಕಮಲ ಅರಳುವುದೇ ಎಂದು ರಾಜ್ಯದ ಜನತೆ ಕುತೂಹಲದಿಂದ ನೋಡುತ್ತಿದೆ. ಆದ್ದರಿಂದ ಇಲ್ಲಿ ಈ ಸಲ ಬಿಜೆಪಿ ಗೆಲ್ಲಲೇಬೇಕಾಗಿದೆ’ ಎಂದಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವರಾಜ ರಾಯ ಗೋಳ, ಮಾಜಿ ಸದಸ್ಯರುಗಳಾದ ರಾಮಲಿಂಗ ರೆಡ್ಡಿ ಸಾಹುಕಾರ್, ರಾಘವೇಂದ್ರ ದೇಸಾಯಿ, ಮೀರಾ ದೀಪಕ ನಾಗದೆ, ಛಾಯಾ ರಾಜಕುಮಾರ, ಸವಿತಾ ಮಹಾದೇವ ಹಲಸೆ, ಸುಭಾಷ ಬಿರಾದಾರ, ನಾಮಾನಂದ ಜಾಧವ, ಮಂಗಲಾಬಾಯಿ ಪಾಟೀಲ, ವಿನಾಯಕ ಹುಲಸೂರ, ಚಂದ್ರಕಾಂತ ಮಲ್ಲಪ್ಪ ಅವರು ಪ್ರಕಟಣೆಯಲ್ಲಿ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.