ADVERTISEMENT

ಬರಹಗಾರರ ಮನಸ್ಥಿತಿ ಬದಲಾಗಲಿ: ಶಿವಕುಮಾರ ಕಟ್ಟೆ ಅಭಿಮತ

ಮನೆಯಂಗಳದಲ್ಲಿ ಮಾತು ಸಂವಾದದಲ್ಲಿ ಶಿವಕುಮಾರ ಕಟ್ಟೆ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 15:04 IST
Last Updated 30 ಅಕ್ಟೋಬರ್ 2020, 15:04 IST
ಬೀದರ್‍ನಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಶಿವಕುಮಾರ ಕಟ್ಟೆ ದಂಪತಿಯನ್ನು ಸನ್ಮಾನಿಸಲಾಯಿತು
ಬೀದರ್‍ನಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಶಿವಕುಮಾರ ಕಟ್ಟೆ ದಂಪತಿಯನ್ನು ಸನ್ಮಾನಿಸಲಾಯಿತು   

ಬೀದರ್: ವಿಮರ್ಶೆ ಹಾಗೂ ಕಟು ಟೀಕೆಗಳನ್ನೂ ಸಹನೆಯಿಂದ ಕೇಳುವಂತೆ ಬರಹಗಾರರ ಮನಸ್ಥಿತಿ ಬದಲಾಗಬೇಕು. ಅಂದಾಗಲೇ ಮೌಲಿಕ ಕೃತಿಗಳನ್ನು ಹೊರತರಲು ಸಾಧ್ಯವಿದೆ ಎಂದು ಸಾಹಿತಿ ಶಿವಕುಮಾರ ಕಟ್ಟೆ ನುಡಿದರು.

ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅವರ ನಿವಾಸದಲ್ಲಿ ನಡೆದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಕೃತಿ ಪೂರ್ಣಪ್ರಮಾಣದಲ್ಲಿದ್ದು ಮೊದಲು ಲೇಖಕನಿಗೆ ತೃಪ್ತಿ ತರಬೇಕು. ನನ್ನ ನಾಲ್ದೆರಾ ಕೃತಿ ಪ್ರವಾಸ ಕಥನವಾಗಿದ್ದು, ಚಾರಿತ್ರಿಕ ಸಂಗತಿಗಳನ್ನು ಸೇರಿಸಿದರೂ ಮೂಲ ಇತಿಹಾಸಕ್ಕೆ ಧಕ್ಕೆ ಬರದಂತೆ ಬರೆದಿರುವೆ. ಬದಲಾವಣೆ ನಿಸರ್ಗ ಸಹಜ ನಿಯಮವಾಗಿರುವಂತೆ ಸಾಹಿತ್ಯ ಕೂಡ ಬದಲಾದ ಕಾಲಗತಿಗೆ ಒಗ್ಗಿಕೊಳ್ಳಬೇಕು. ಅವಸರದ ಸಾಹಿತ್ಯ ಹೆಚ್ಚಾಗಿ ಬರುತ್ತಿದ್ದರೂ ಗಟ್ಟಿ ಸಾಹಿತ್ಯ ಮಾತ್ರ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ನನಗೆ ಕೆರಳ್ಳಿ ಲಕ್ಷ್ಮಾರೆಡ್ಡಿ ಸಾಹಿತ್ಯ ರಚನೆಗೆ ಪ್ರೇರಣೆಯಾದರೆ, ಸಾ.ಸಿ ಮರುಳಯ್ಯ ಮೊದಲಾದ ಹಿರಿಯ ಸಾಹಿತಿಗಳು ತಮ್ಮ ಮೇಲೆ ಪ್ರಭಾವ ಬೀರಿದರು ಎಂದು ಹೇಳಿದರು.

ಹಿರಿಯ ಚಿಂತಕ ರಾಮಕೃಷ್ಣನ್ ಸಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆಗೆ ಈ ಕಾರ್ಯಕ್ರಮಗಳು ಮಾದರಿಯಾಗಿದ್ದು, ಇದೊಂದು ಉತ್ತಮ ಕಾರ್ಯಕ್ರಮ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ. ಎಸ್. ಮನೋಹರ ಮಾತನಾಡಿ, ಕಟ್ಟೆಯವರದ್ದು ಉದಾರ ಮನಸ್ಸು ಇದೆ. ಅವರಿಗೆ ಯಾವುದೇ ಹಪಾಹಪಿತನವಿಲ್ಲದ ಕಾರಣ ಪ್ರಬುದ್ಧ ಸಾಹಿತ್ಯ ರಚಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಗೌರವ ಕಾರ್ಯದರ್ಶಿ ಬಸವರಾಜ ಬಲ್ಲೂರ ಮಾತನಾಡಿದರು.

ಸಂಜೀವಕುಮಾರ ಅತಿವಾಳೆ ಸಂವಾದ ನಡೆಸಿಕೊಟ್ಟರು. ಯುವ ಉದ್ಯಮಿ ವೀರಶೆಟ್ಟೊ ಪಟ್ನೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಾಹಿತಿಗಳಾದ ರಮೇಶ ಬಿರಾದಾರ, ಡಾ. ರಘುಶಂಖ ಭಾತಂಬ್ರಾ, ಓಂಪ್ರಕಾಶ ದಡ್ಡೆ, ಜಯದೇವಿ ಯದಲಾಪುರೆ, ಶಂಭುಲಿಂಗ ವಾಲ್ದೊಡ್ಡಿ, ಪ್ರಮುಖರಾದ ನಾಗಶೆಟ್ಟಿ ಧರ್ಮಪುರ, ಸತ್ಯಮೂರ್ತಿ, ನಾಗರಾಜ ಜೋಗಿ, ಪರಮೇಶ್ವರ ಬಿರಾದಾರ, ಜಯಪ್ರಕಾಶ ಬಿರಾದಾರ, ಸಿದ್ಧಾರೂಢ ಭಾಲ್ಕೆ ಇದ್ದರು. ಟಿ.ಎಂ. ಮಚ್ಚೆ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ನಿರೂಪಿಸಿದರು. ಜಯಶ್ರೀ ಸುಕಾಲೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.