ADVERTISEMENT

ಚಿಟಗುಪ್ಪ: 'ಪಾರದರ್ಶಕ ಆಡಳಿತ ಗುರಿಯಾಗಲಿ'

ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 12:20 IST
Last Updated 29 ಡಿಸೆಂಬರ್ 2020, 12:20 IST
ಚಿಟಗುಪ್ಪ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು
ಚಿಟಗುಪ್ಪ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು   

ಚಿಟಗುಪ್ಪ: ‘ಪುರಸಭೆ ಪದಾಧಿಕಾರಿಗಳು ಪಕ್ಷಬೇಧ ಮರೆತು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು. ಪಾರದರ್ಶಕ ಆಡಳಿತ ನೀಡುವ ಉದ್ದೇಶ ಹೊಂದಿರಬೇಕು’ ಎಂದು ಶಾಸಕ ರಾಜಶೇಖರ ಪಾಟೀಲ ಸಲಹೆ ನೀಡಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಪುರಸಭೆಯ ಪ್ರಥಮ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪುರಸಭೆಗೆ ಆಯ್ಕೆಯಾದ ಸಾಕಷ್ಟು ಸದಸ್ಯರು ಅನುಭವಿಗಳಾಗಿದ್ದೀರಿ. ಎಲ್ಲರೂ ಅಧ್ಯಕ್ಷ, ಉಪಾಧ್ಯಕ್ಷರ ಜತೆ ವಾರ್ಡ್‌ ವ್ಯಾಪ್ತಿಯ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಬೇಕು. ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಸೌಕರ್ಯ ಒದಗಿಸುವ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಪುರಸಭೆ ಹಾಗೂ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪಟ್ಟಣದ ಎಲ್ಲ ಎನ್‌ಎ ಬಡಾವಣೆಗಳಲ್ಲಿ ಸಿಎ ನಿವೇಶನಗಳನ್ನು ಗುರುತಿಸಿ, ಅವುಗಳಿಗೆ ರಕ್ಷಣೆ ನೀಡಬೇಕು’ ಎಂದು ಮುಖ್ಯಾಧಿಕಾರಿಗಳಿಗೆ ಅವರು ಆದೇಶಿಸಿದರು.

₹2 ಕೋಟಿ ವೆಚ್ಚದ ಬಿಸಿಎಂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಪಟ್ಟಣದಲ್ಲಿ ನಾಗರಿಕ ಸೌಲಭ್ಯಕ್ಕೆ ಕಾಯ್ದಿರಿಸಿದ ಸರ್ವೆ ನಂಬರ್ 284/5 ರಲ್ಲಿ ಸ್ಥಳ ಮಂಜೂರು ಮಾಡುವ ಪ್ರಸ್ತಾವಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ವಾರ್ಡ್‌ ಸಂಖ್ಯೆ 1 ರಲ್ಲಿ ನಡೆಯುತ್ತಿರುವ ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಎಂದು ಸದಸ್ಯ ನಸೀರ್ ಅಹ್ಮದ್ ಆರೋಪಿಸಿದರು. ಆನ್‌ಲೈನ್‌ ಖಾತಾ ಮಾಡಲು ಸಿಬ್ಬಂದಿ ಅನಾವಶ್ಯಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯೆ ಜಲಿಸಾ ಬೇಗಂ ದೂರಿದರು.

ಸದಸ್ಯ ಹಬೀಬ್ ಮಾತನಾಡಿ,‘ಪಟ್ಟಣದ ಬಡಾವಣೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸದಸ್ಯ ರಾಜದೀಪ್ ಮಾತನಾಡಿ,‘ಮಹಿಳಾ ಪೌರಕಾರ್ಮಿಕರಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಿಸಲಾಗಿದೆ’ ಎಂದು ಆರೋಪಿಸಿದರು.

ಅದಕ್ಕೆ ಶಾಸಕ ರಾಜಶೇಖರ ಪಾಟೀಲ ಪ್ರತಿಕ್ರಿಯಿಸಿ,‘ಮಹಿಳಾ ಪೌರಕಾರ್ಮಿಕರಿಗೆ ನನ್ನ ಹಣದಲ್ಲಿ ಉತ್ತಮ ಗುಣಮಟ್ಟದ ಸಮವಸ್ತ್ರ ವಿತರಿಸಲಾಗುವುದು. ಅಧಿಕಾರಿಗಳು ತಕ್ಷಣ ಸಮವಸ್ತ್ರ ನೀಡಲು ವ್ಯವಸ್ಥೆ ಮಾಡಬೇಕು’ ಎಂದರು.

ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.

ಮುಖ್ಯಾಧಿಕಾರಿ ಶ್ರೀಪಾದ್ ಮಾತನಾಡಿ‘ಹಸಿ ಕಸ, ಒಣ ಕಸ ಸಂಗ್ರಹಿಸುವ ತೊಟ್ಟಿಗಳಿವೆ. ಅವುಗಳನ್ನು 23 ಸದಸ್ಯರಿಗೆ ಸಮಾನವಾಗಿ ಹಂಚಬೇಕು. ಅವರ ವಾರ್ಡ್‌ಗಳಲ್ಲಿ ಸೂಚಿಸಿದ ಸ್ಥಳಗಳಲ್ಲಿ ಅಳವಡಿಸಬೇಕು’ ಎಂದು ಪರಿಸರ ಎಂಜಿನಿಯರ್‌ ಪೂಜಾ ಅವರಿಗೆ ಸೂಚಿಸಿದರು.

ನಾಗರಿಕರು ನೀರು, ಮನೆ, ವಾಣಿಜ್ಯ ಮಳಿಗೆಗಳ ಕರ ಪಾವತಿಸಬೇಕು. ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಭೆಯಲ್ಲಿ ಎಲ್ಲರೂ ಆಗ್ರಹಿಸಿ ಕರ ವಸೂಲಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷೆ ಮಾಲಾಶ್ರೀ ಶಾಮರಾವ್, ಉಪಾಧ್ಯಕ್ಷ ಸೌಭಾಗ್ಯವತಿ ಅಶೋಕ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.