ADVERTISEMENT

ಎಲ್‌ಐಸಿ ನೌಕರರ ದೇಶದಾದ್ಯಂತ ಮುಷ್ಕರ 18ಕ್ಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 14:57 IST
Last Updated 7 ಮಾರ್ಚ್ 2021, 14:57 IST
ಎಂ.ರವಿ
ಎಂ.ರವಿ   

ಬೀದರ್‌: ಸಾರ್ವಜನಿಕ ವಲಯದ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲು ಹೊರಟಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಅಖಿಲ ಭಾರತ ವಿಮಾ ನೌಕರರ ಸಂಘ ಹಾಗೂ ಕಾರ್ಮಿಕ ಸಂಘಟನೆಗಳು ಮಾರ್ಚ್‌ 18ಕ್ಕೆ ಮುಷ್ಕರ ನಡೆಸಲು ನಿರ್ಧರಿಸಿವೆ.

ಕೇಂದ್ರ ಸರ್ಕಾರ, ಎಲ್‌ಐಸಿ ಷೇರುಗಳನ್ನು ಐ.ಪಿ.ಒ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹಾಗೂ ವಿಮಾ ವಲಯದಲ್ಲಿ ಎಫ್.ಡಿ.ಐ ಮಿತಿಗಳನ್ನು ಶೇಕಡ 49% ರಿಂದ 74ಕ್ಕೆ ಹೆಚ್ಚಿಸಲು ನಿರ್ಧರಿಸಿರುವುದನ್ನು ವಿರೋಧಿಸಿ
ಮುಷ್ಕರ ನಡೆಸಲಾಗುವುದು ಎಂದು ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಪಾಲಿಸಿದಾರರಿಗೆ ಹೆಚ್ಚಿನ ಭದ್ರತೆಯನ್ನು ನೀಡುವಾಗ ಸಣ್ಣ ಉಳಿತಾಯವನ್ನು ಪ್ರೀಮಿಯಂ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇದನ್ನು ದೇಶದ ಆರ್ಥಿಕತೆಗೆ ಹಾಗೂ ಕೈಗಾರಿಕೀಕರಣ ಅಭಿವೃದ್ಧಿಗೂ ಬಳಸಲಾಗುತ್ತದೆ. ಖಾಸಗೀಕರಣದಿಂದ ಮೂಲ ಉದ್ದೇಶಕ್ಕೆ ಧಕ್ಕೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

1956ರಲ್ಲಿ ಎಲ್.ಐ.ಸಿಯಲ್ಲಿ ₹5 ಕೋಟಿ ಬಂಡವಾಳ ಹೂಡಲಾಗಿತ್ತು. ನಿಯಂತ್ರಕ ಅಗತ್ಯತೆಗಳನ್ನು ಪೂರೈಸಲು ಇದನ್ನು 2011ರಲ್ಲಿ ₹100 ಕೋಟಿಗೆ ಹೆಚ್ಚಿಸಲಾಯಿತು. ಈ ಸಣ್ಣ ಬಂಡವಾಳದಲ್ಲಿ ಎಲ್ಐಸಿ ಪಾಲು 2020ರ ಮಾರ್ಚ್‌ನಲ್ಲಿ ₹32 ಲಕ್ಷ ಕೋಟಿ ಇತ್ತು. ಈ ವರೆಗೆ 30 ಕೋಟಿ ವೈಯಕ್ತಿಕ ಪಾಲಿಸಿದಾರರ ಹಾಗೂ 12 ಕೋಟಿ ಗುಂಪು ಯೋಜನೆಗಳ ಪಾಲಿಸಿದಾರರ ವಿಮೆ ಮಾಡಲಾಗಿದೆ ಎಂದು ಹೇಳಿದರು.

ಎಲ್ಐಸಿ ಸಮಾಜದ ದುರ್ಬಲ ವರ್ಗಗಳ ಅಗತ್ಯಗಳಿಗೆ ಪ್ರಾಮುಖ್ಯ ನೀಡಿದೆ. ರಾಷ್ಟ್ರದ ಹಲವು ಅಭಿವೃದ್ಧಿ ಯೋಜನೆ, ಸಾಮಾಜಿಕ ಭದ್ರತೆ ಯೋಜನೆಗಳಲ್ಲೂ ಹಣ ತೊಡಗಿಸಿದೆ. ಸಾರ್ವಜನಿಕ ವಲಯದ ಅಭಿವೃದ್ಧಿಯೇ ಇದರ ಉದ್ದೇಶವಾಗಿದೆ. ಅಲ್ಪ ಹೂಡಿಕೆಗೆ ನಿರಂತರವಾಗಿ ಹೆಚ್ಚಿನ ಲಾಭಾಂಶವನ್ನು ಸರ್ಕಾರಕ್ಕೆ ನೀಡುತ್ತಿದೆ. 2019-20ನೇ ಸಾಲಿಗೆ ಅದು ₹2698 ಕೋಟಿ ಮೊತ್ತದ ಲಾಭಾಂಶವನ್ನು ಸರ್ಕಾರಕ್ಕೆ ಪಾವತಿಸಿದೆ ಎಂದು ತಿಳಿಸಿದರು.

ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣದಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆ. ರಾಷ್ಟ್ರೀಕರಣದ ಉದ್ದೇಶಗಳಿಗೆ ಹಿನ್ನಡೆಯಾಗಲಿದೆ. ದೇಶದಲ್ಲಿ ಸಾರ್ವಜನಿಕರ ಉಳಿತಾಯವನ್ನು ನಿಯಂತ್ರಿಸಲು ವಿದೇಶಿ ಬಂಡವಾಳವನ್ನು ಅನುಮತಿಸುವುದು ತಪ್ಪು ನಿರ್ಧಾರವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.