ಹುಲಸೂರ: ಹಣಗಳಿಸುವ ನೆಪದಲ್ಲಿ ಮನುಷ್ಯ ಧಾರ್ಮಿಕ ಕಾರ್ಯಗಳಿಂದ ದೂರ ಉಳಿಯುತ್ತಿರುವುದರಿಂದ ಮಮತೆ, ವಾತ್ಸಲ್ಯ, ಪ್ರೀತಿ, ವಿಶ್ವಾಸ ಪರಸ್ಪರರಲ್ಲಿ ಕ್ಷೀಣಿಸುತ್ತಿದೆ. ಮನುಷ್ಯ ತನ್ನ ಜೀವನ ಪಾವನ ಮಾಡಿಕೊಳ್ಳಲು ಸಂತ, ಸತ್ಪರುಷರ, ಮಹಾತ್ಮರ, ಶರಣರ ವಾಣಿ ಆಲಿಸುವುದು ಅಗತ್ಯವಾಗಿದೆ’ ಎಂದು ಕೀರ್ತನಕಾರ ನಿವರ್ತಿ ಮಹಾರಾಜ ಇಂದೋರಿಕರ ಹೇಳಿದರು.
ಸಮೀಪದ ಕೆಸರ ಜವಳಗಾ ಗ್ರಾಮದಲ್ಲಿ ನಡೆದ 25ನೇ ವರ್ಷದ ಅಖಂಡ ಹರಿನಾಮ ಸಪ್ತಾಹ ಮತ್ತು ಶ್ರೀ ಜ್ಞಾನೇಶ್ವರಿ ಪಾರಾಯಣ ಸಮಾರೋಪ ಸಮಾರಂಭದಲ್ಲಿ ಗೋಪಾಲ ಕಾಲಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಆಧುನಿಕತೆ ಹೆಸರಿನಲ್ಲಿ ಜನತೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆಯುತ್ತಿದ್ದಾರೆ. ಅಖಂಡ ಹರಿನಾಮ ಸಪ್ತಾಹ ಸನಾತನ ಧರ್ಮವನ್ನು ಉಳಿಸಲು ಮತ್ತು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಸಹಕಾರಿಯಾಗಿವೆ’ ಎಂದರು.
ಕಾಲ ಕ್ರಮೇಣ ಜನತೆ ಸುಖ, ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಹರಿನಾಮ ಸಪ್ತಾಹ ಜೀವನದಲ್ಲಿ ಸಕಾರಾತ್ಮಕತೆಯನ್ನು ಪ್ರೇರೇಪಿಸಿ, ಜೀವನ ಉಜ್ವಲಗೊಳಿಸುತ್ತದೆ ಎಂದರು.
ಕೀರ್ತನಕಾರ ಶಿವಾಜಿ ಮಹಾರಾಜ ಮಾತನಾಡಿದರು.
ಹರಿನಾಮ ಸಪ್ತಾಹದ ನಿಮಿತ್ತ ಗ್ರಾಮದಲ್ಲಿ ಜ್ಞಾನೇಶ್ವರಿ ಭಾವಚಿತ್ರದೊಂದಿಗೆ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮಹಾದೇವ ಮಂದಿರ ಆವರಣದಲ್ಲಿ ಸತತ 7 ದಿನಗಳವರೆಗೆ ನಿತ್ಯ ನಡೆದಿರುವ ಕಾಕಡಾ, ಭಜನೆ, ಕೀರ್ತನೆ, ಹರ ಪಾಠ, ಜಾಗರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.