ಬೀದರ್: ‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ಜರುಗಿದ್ದು, ಅಕ್ಟೋಬರ್ 5ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದ ಗೇಟ್ ಸಂಖ್ಯೆ 4ರಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. 2 ಲಕ್ಷಕ್ಕೂ ಅಧಿಕ ಬಸವ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಉಪಾಧ್ಯಕ್ಷರೂ ಆದ ಅಭಿಯಾನ ಸಮಿತಿಯ ಉಸ್ತುವಾರಿ ಬಸವರಾಜ ಧನ್ನೂರ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 500ಕ್ಕೂ ಅಧಿಕ ಬಸವಪರ ಮಠಾಧೀಶರು, ರಾಜ್ಯದ ವಿವಿಧ ಭಾಗದ 2 ಲಕ್ಷಕ್ಕೂ ಹೆಚ್ಚು ಬಸವಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಾಹಿತಿ ಹಂಚಿಕೊಂಡರು.
ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ, ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸಬೇಕೆಂದು ಆದೇಶಿಸಿ ಒಂದು ವರ್ಷ ಪೂರೈಸಿದೆ. ಮುಂದಿನ ಪೀಳಿಗೆಗೆ ಬಸವಣ್ಣನವರ ಜೀವನ ಸಾಧನೆ ಪರಿಚಯಿಸುವುದು ನಮ್ಮ ಆದ್ಯ ಕರ್ತವ್ಯ. ಈ ಪ್ರಯುಕ್ತ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ ಸೇರಿದಂತೆ ಹತ್ತಾರು ಬಸವಪರ ಸಂಘಟನೆಗಳ ವತಿಯಿಂದ ಅ. 5ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಅಭಿನಂದಿಸಲಾಗುವುದು ಎಂದರು.
ಬೀದರ್ ಜಿಲ್ಲೆಯೊಂದರಿಂದಲೇ ಸಮಾರೋಪಕ್ಕೆ ಹತ್ತು ಸಾವಿರಕ್ಕೂ ಅಧಿಕ ಬಸವ ಭಕ್ತರು ತೆರಳಲಿದ್ದಾರೆ. ಪ್ರತಿಯೊಬ್ಬರೂ ಬಿಳಿ ಧೋತಿ ಮತ್ತು ಇಳಕಲ್ ಸೀರೆ ಧರಿಸಬೇಕು. ಬೆಂಗಳೂರಿಗೆ ಹೋಗಲು ವಿಶೇಷ ರೈಲಿನ ವ್ಯವಸ್ಥೆಗಾಗಿ ಈಗಾಗಲೇ ಸಂಸದ ಸಾಗರ್ ಖಂಡ್ರೆ ಹಾಗೂ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಒಬ್ಬರಿಗೆ ಹೋಗಿ ಬರಲು ₹2 ಸಾವಿರ ಮತ್ತು ಸ್ಲೀಪರ್ ಕೋಚ್ ಬಸ್ಸಿಗೆ ಹೋಗಿ ಬರಲು ಒಬ್ಬರಿಗೆ ₹3 ಸಾವಿರ ಹಣ ನಿಗದಿಪಡಿಸಲಾಗಿದೆ. ನಾಲ್ಕು ಚಕ್ರದ ವಾಹನದಲ್ಲಿ ಹೋಗುವವರು ಅ. 4ರಂದು ಸಂಜೆ 6ಕ್ಕೆ ನೌಬಾದ್ ಬಸವೇಶ್ವರ ವೃತ್ತದ ಹತ್ತಿರ ಸೇರಬೇಕು ಎಂದು ಮನವಿ ಮಾಡಿದರು.
ಸಮಾರೋಪಕ್ಕೆ ಬರುವವರಿಗೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸ್ನಾನ, ಪೂಜೆ, ಪ್ರಸಾದದ ವ್ಯವಸ್ಥೆ ಮಾಡಿಸಲಾಗಿದೆ. ಶ್ರೀಮಠದ ಪಿಆರ್‌ಒ ನಾಗರಾಜ ಅವರ ಮೊಬೈಲ್ ಸಂಖ್ಯೆ: 9448899233 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪ್ರಮುಖರಾದ ರಾಜೇಂದ್ರ ಜೊನ್ನಿಕೇರಿ, ಜೈರಾಜ ಖಂಡ್ರೆ, ವೀರಭದ್ರಪ್ಪ ಬುಯ್ಯಾ, ಯೋಗೇಂದ್ರ ಯದಲಾಪೂರೆ ಹಾಜರಿದ್ದರು.
- ‘ಲಿಂಗಾಯತ ಧರ್ಮವಲ್ಲ ಎನ್ನುವುದು ಧರ್ಮದ್ರೋಹ’
‘ಲಿಂಗಾಯತ ಧರ್ಮ ಅಲ್ಲ ಎಂದು ಕೆಲವು ರಾಜಕಾರಣಿಗಳು ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಯೇ ಒಂದು ಧರ್ಮದ್ರೋಹವಾಗಿದೆ. ‘ಎಮಗೂ ನಿಮಗೂ ಬಸವಣ್ಣನ ಧರ್ಮವಯ್ಯಾ’ ಎಂದು ಕಾಯಕ ಯೋಗಿ ಸಿದ್ಧರಾಮೇಶ್ವರರು ಹೇಳಿರುವಾಗ ಇವರೆಲ್ಲರೂ ಬಸವಾದಿ ಶರಣರಿಗಿಂತ ದೊಡ್ಡವರೇ’ ಎಂದು ಬಸವರಾಜ ಧನ್ನೂರ ಪ್ರಶ್ನಿಸಿದರು. ಕೆಲವರು ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ. ಹಿಂದೂ ಎಂದು ಬರೆಸಿ ಎನ್ನುತ್ತಿದ್ದಾರೆ. ಚಿನ್ನಕ್ಕೆ ಸರ್ಕಾರಿ ಮೊಹರು ಇಲ್ಲದಿದ್ದರೆ ಅದು ತನ್ನ ಬೆಲೆ ಕಳೆದುಕೊಳ್ಳುವುದೇ? ಹಾಗೆಯೇ ಮಾನ್ಯತೆ ಸದ್ಯ ಸಿಗದಿದ್ದರೂ ಬಸವಣ್ಣನವರು ಕೊಟ್ಟ ಪರಿಪೂರ್ಣ ಸಾಂವಿಧಾನಿಕ ಧರ್ಮ ‘ಲಿಂಗಾಯತ ಧರ್ಮ’ವೇ ಆಗಿದೆ. ಯಾರಾದರೂ ಲಿಂಗಾಯತ ಧರ್ಮ ಅಲ್ಲ ಎಂದು ಸಾಬೀತುಪಡಿಸಿದರೆ ನಾನು ‘ಮೂಗ ಕೊಯ್ದುಕೊಳ್ಳುವೆ’ ಎಂದರು. ಲಿಂಗಾಯತರು ಈಗ ಜಾಗೃತರಾಗಿದ್ದಾರೆ. ಇಂತಹ ದಾರಿ ತಪ್ಪಿಸುವ ಹೇಳಿಕೆ ಯಾರೂ ನೀಡಬಾರದು. ವೀರಶೈವ ಕೂಡ ಲಿಂಗಾಯತ ಧರ್ಮದ ಒಂದು ಒಳಪಂಗಡ. ಮಾನ್ಯತೆ ಸಿಗುವುದರಿಂದ ಆ ಪಂಗಡದವರಿಗೂ ಅನುಕೂಲವಿದೆ ಎಂದರು.
ಬಸವಣ್ಣ ಧರ್ಮಗುರು ಪಂಚ ಪೀಠಾಧೀಶರು ಒಪ್ಪಲಿ’
‘ಬಸವಣ್ಣ ಧರ್ಮಗುರು ಎಂದು ರಂಭಾಪುರಿ ಶ್ರೀಗಳು ಸೇರಿದಂತೆ ಪಂಚ ಪೀಠಾಧೀಶರು ಒಪ್ಪಲಿ. ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇವೆ’ ಎಂದು ಬಸವರಾಜ ಧನ್ನೂರ ಹೇಳಿದರು. ತ್ರಿಪುರಾಂತ ಕೆರೆಗೆ ರೇವಣಸಿದ್ಧರ ಹೆಸರಿಡಬೇಕು. ಬಸವಕಲ್ಯಾಣದಲ್ಲಿ ರೇಣುಕಾಚಾರ್ಯರ ವೃತ್ತ ಸ್ಥಾಪಿಸಬೇಕೆಂಬ ಹೇಳಿಕೆ ನೀಡಿರುವ ರಂಭಾಪುರಿ ಶ್ರೀಗಳು ತಮ್ಮ ಹೇಳಿಕೆ ಹಿಂಪಡೆಯಬೇಕು. ನಾವು ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡುವುದಿಲ್ಲ. ಹಾಗೇನಾದರೂ ಪ್ರಯತ್ನಗಳು ನಡೆದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.