ಬೀದರ್: ‘ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಅವರ ಜಯಂತಿ ಆಚರಣೆ ಜೊತೆಗೆ ಪೌರಾಣಿಕ, ಕಾಲ್ಪನಿಕ ರೇಣುಕಾಚಾರ್ಯರ ಜಯಂತಿ ಆಚರಿಸಬೇಕು ಎಂದು ವೀರಶೈವ ಲಿಂಗಾಯತ ಮಹಾಸಭೆ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೊರಡಿಸಿರುವ ಸುತ್ತೋಲೆ ಖಂಡನಾರ್ಹ’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ವಿರೋಧಿಸಿದೆ.
‘ಶಂಕರ ಬಿದರಿ ಅವರ ನಡೆ ಇತಿಹಾಸಕ್ಕೆ ಮಾಡುವ ಬಹುದೊಡ್ಡ ದ್ರೋಹ. ಅವರ ಈ ನಿರ್ಧಾರದಿಂದ ಇಡೀ ಲಿಂಗಾಯತ ಸಮಾಜಕ್ಕೆ ಬೇಸರವಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷರಾದ ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಬಿದರಿ ಅವರು ಬಸವತತ್ವ ಅರಿತವರು. ಬಸವಣ್ಣ ಅವರ ಜಯಂತಿ ಜೊತೆಗೆ ಬೇರೊಂದು ಜಯಂತಿ ತಳುಕು ಹಾಕುವುದು ಸರಿಯಲ್ಲ. ಸುತ್ತೋಲೆ ವಾಪಸು ಪಡೆಯಬೇಕು’ ಎಂದರು.
‘ಬಸವಣ್ಣನವರ ಜಯಂತಿಗೆ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಇದರ ಆಚರಣೆಗೆ ಹರ್ಡೆಕರ್ ಮಂಜಪ್ಪ ಮತ್ತು ಇತರ ಮಹನೀಯರು ಪರಿಶ್ರಮ ಪಟ್ಟಿದ್ದಾರೆ. ಬಿದರಿ ಅವರ ನಡೆ ಈ ಎಲ್ಲರ ತ್ಯಾಗ, ಪರಿಶ್ರಮಕ್ಕೆ ಚ್ಯುತಿ ತರುವಂತಹದ್ದು. ರೇಣುಕಾಚಾರ್ಯರ ಭಕ್ತರು ಫಾಲ್ಗುಣ ಶುದ್ಧ ತ್ರಯೋದಶಿದಂದು ಅವರ ಜಯಂತಿ ಆಚರಿಸುತ್ತಿದ್ದಾರೆ. ಈಗ ಅದನ್ನು ಬಸವ ಜಯಂತಿಗೆ ತಳಕು ಹಾಕುವುದು ಅನೈತಿಕ ಮತ್ತು ಅಕ್ಷಮ್ಯ‘ ಎಂದು ಹೇಳಿದರು.
‘ಬಿದರಿ ಅವರ ತಪ್ಪು ಹೆಜ್ಜೆ ಶರಣಚರಿತ್ರೆ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಈಗ ಆಗಿರುವ ತಪ್ಪನ್ನು ವೀರಶೈವ ಲಿಂಗಾಯತ ಮಹಾಸಭೆ ಸರಿಪಡಿಸಬೇಕು. ಇಲ್ಲದಿದ್ದರೆ ಲಿಂಗಾಯತ ಸಮಾಜ ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.