ADVERTISEMENT

ಬಸವಕಲ್ಯಾಣ: ಬಸವಧರ್ಮ ಪೀಠದಿಂದ ಬೃಹತ್ ಮೆರವಣಿಗೆ

ಬಸವಕಲ್ಯಾಣದಲ್ಲಿ ಮೂರು ದಿನಗಳ 24ನೇ ಕಲ್ಯಾಣ ಪರ್ವಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:24 IST
Last Updated 13 ಅಕ್ಟೋಬರ್ 2025, 5:24 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಬಸವಣ್ಣನವರ ಬೃಹತ್ ಪ್ರತಿಮೆ ಕೊಂಡೊಯ್ಯಲಾಯಿತು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಬಸವಣ್ಣನವರ ಬೃಹತ್ ಪ್ರತಿಮೆ ಕೊಂಡೊಯ್ಯಲಾಯಿತು   

ಬಸವಕಲ್ಯಾಣ: ನಗರದ ಬಸವ ಮಹಾಮನೆಯಲ್ಲಿ ಬಸವಧರ್ಮ ಪೀಠದಿಂದ ಮೂರು ದಿನಗಳಿಂದ ನಡೆದ 24ನೇ ಕಲ್ಯಾಣ ಪರ್ವಕ್ಕೆ ಭಾನುವಾರ ನಗರದ ಮುಖ್ಯ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸುವುದರೊಂದಿಗೆ ಸಂಭ್ರಮದ ತೆರೆ ಎಳೆಯಲಾಯಿತು.

ಕೋಟೆ ಎದುರಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಸಂದೇಶ ಬರೆದಿರುವ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಸವಣ್ಣನವರ ಹಾಗೂ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯವರ ಪ್ರತಿಮೆಗಳನ್ನು ಪುಷ್ಪಗಳಿಂದ ಅಲಂಕೃತವಾದ ಪ್ರತ್ಯೇಕ ಸಾರೋಟದಲ್ಲಿ ಇಡಲಾಗಿತ್ತು. ಬಸವಣ್ಣನವರ ಇನ್ನೊಂದು ದೊಡ್ಡ ಪ್ರತಿಮೆ ತೆರೆದ ವಾಹನದಲ್ಲಿ ಇಡಲಾಗಿತ್ತು. ವಿವಿಧ ಶರಣರ ವೇಷಧಾರಿಗಳು ಕುದುರೆಗಳ ಮತ್ತು ಒಂಟೆಗಳ ಮೇಲೆ ಆಸೀನರಾಗಿದ್ದರು.

ಅನೇಕರು ಧ್ವಜಗಳನ್ನು ಹಿಡಿದಿದ್ದರು. ಶ್ವೇತ ವಸ್ತ್ರ, ಟೊಪ್ಪಿಗೆ, ಹೆಗಲ ಮೇಲೆ ಕ್ರಾಫ್ ಧರಿಸಿದ್ದ ಮಹಿಳೆಯರು, ಯುವಕರು ಮೆರವಣಿಗೆಯುದ್ದಕ್ಕೂ ಕುಣಿದರು. ವಚನ ಸಂಗೀತ, ಜಾನಪದ ಹಾಡುಗಾರರು ಇದ್ದರು. ಡೊಳ್ಳು ಕುಣಿತ, ಹಲಿಗೆ ವಾದನ ಮತ್ತಿತರೆ ವಾದ್ಯ ಮೇಳದವರು ಪಾಲ್ಗೊಂಡಿದ್ದರಿಂದ ಮೆರುಗು ಪ್ರಾಪ್ತವಾಗಿತ್ತು.

ADVERTISEMENT

ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಶೂನ್ಯ ಪೀಠಾಧ್ಯಕ್ಷ ಸಿದ್ರಾಮೇಶ್ವರ ಸ್ವಾಮೀಜಿ, ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ, ಶಿವಕುಮಾರ ಸ್ವಾಮೀಜಿ, ಮಾತೆ ಸತ್ಯಾದೇವಿ, ಶಾಸಕರುಗಳಾದ ಡಾ.ಸಿದ್ದಲಿಂಗಪ್ಪ ಪಾಟೀಲ ಹುಮನಾಬಾದ್, ಡಾ.ಶೈಲೇಂದ್ರ ಬೆಲ್ದಾಳೆ ಬೀದರ್, ಕಾರ್ಯಕ್ರಮ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಬಸವರಾಜ ಬುಳ್ಳಾ, ಅಧ್ಯಕ್ಷ ಕಂಟೆಪ್ಪ ಗಂದಿಗುಡಿ, ಪ್ರಧಾನ ಕಾರ್ಯದರ್ಶಿ ಶಿವರಾಜ ನರಶೆಟ್ಟಿ, ರಾಷ್ಟ್ರೀಯ ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಕೊಳಕೂರ, ಸೋಮನಾಥ ಪಾಟೀಲ ಗಾದಗಿ, ಬಸವ ಕೇಂದ್ರದ ಅಧ್ಯಕ್ಷ ಆಕಾಶ ಖಂಡಾಳೆ, ರಾಜೇಂದ್ರಕುಮಾರ ಗಂದಗೆ, ವೀರಶೆಟ್ಟಿ ಇಮ್ಡಾಪುರ, ಮಹಾದೇವ ಭಾತಂಬ್ರಾ ಪಾಲ್ಗೊಂಡಿದ್ದರು.

ಉದ್ಘಾಟನೆ: ಕಾರ್ಯಕ್ರಮದ ಮೊದಲ ದಿನ ಶನಿವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯ ರಸ್ತೆಯಿಂದ ಬಸವ ಮಹಾಮನೆ ಆವರಣದಲ್ಲಿನ ಬಸವಣ್ಣನವರ 108 ಅಡಿ ಎತ್ತರದ ಪುತ್ಥಳಿಗೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ಮತ್ತು ಸೇತುವೆಯ ಉದ್ಘಾಟನೆ ನೆರವೇರಿಸಿದರು. ಮಾತೆ ಗಂಗಾದೇವಿ, ಶಾಸಕ ಶರಣು ಸಲಗರ, ಶಿವರಾಜ ನರಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಶರಣರ ವೇಷಧಾರಿಗಳು ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಶಾಸಕರಾದ ಡಾ.ಸಿದ್ಧಲಿಂಗಪ್ಪ ಪಾಟೀಲ ಡಾ.ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24 ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಬಲೂನು ಹಾರಿ ಬಿಡಲಾಯಿತು. ಮಾತೆ ಗಂಗಾದೇವಿ ಅಕ್ಕ ಗಂಗಾಂಬಿಕಾ ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ ಡಾ.ಶೈಲೇಂದ್ರ ಬೆಲ್ದಾಳೆ ಬಸವರಾಜ ಬುಳ್ಳಾ ಶಿವರಾಜ ನರಶೆಟ್ಟಿ ರವೀಂದ್ರ ಕೊಳಕೂರ ಮತ್ತಿತರರು ಪಾಲ್ಗೊಂಡಿದ್ದರು

ಗುಲಬರ್ಗಾ ವಿವಿಗೆ ಬಸವೇಶ್ವರರ ಹೆಸರಿಡಿ

ಸಮಾರಂಭದಲ್ಲಿ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿಯವರ ನೇತೃತ್ವದಲ್ಲಿ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಡುವುದು ಒಳಗೊಂಡಂತೆ 8 ನಿರ್ಣಯಗಳನ್ನು ಮಂಡಿಸಲಾಯಿತು. ಬಸವಾದಿ ಶರಣರ ಕಾರ್ಯಕ್ಷೇತ್ರವಾದ ಬಸವಕಲ್ಯಾಣದಲ್ಲಿ ಇನ್ನಷ್ಟು ಅಭಿವೃದ್ಧಿ ಕೈಗೊಳ್ಳುವುದಕ್ಕಾಗಿ ಇದನ್ನು ಜಿಲ್ಲಾ ಕೇಂದ್ರವೆಂದು ಘೋಷಿಸುವುದು. ರೈಲ್ವೆ ಮಾರ್ಗ ನಿರ್ಮಿಸುವುದು. ಬೆಂಗಳೂರಿನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ವಿಶ್ವಗುರು ಬಸವೇಶ್ವರ ಕ್ರೀಡಾಂಗಣ ಎಂದು ಹೆಸರಿಡುವುದು. ಯಶವಂತಪುರ ರೈಲು ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರ ರೈಲು ನಿಲ್ದಾಣ ಎಂದು ನಾಮಕರಣ ಮಾಡುವುದು ಈಗಾಗಲೇ ಮುಖ್ಯಮಂತ್ರಿಯವರು ಘೋಷಿಸಿರುವಂತೆ ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡುವ ಕಾರ್ಯ ಶೀಘ್ರದಲ್ಲಿ ಕೈಗೊಳ್ಳುವುದು. ಧಾರವಾಡದಿಂದ ಉಳವಿವರೆಗಿನ ರಸ್ತೆ ಪಕ್ಕದಲ್ಲಿ ಹೂಗಿಡಗಳನ್ನು ಬೆಳೆಸಿ ಸುಂದರಗೊಳಿಸಬೇಕು ಎಂದು ಬೇಡಿಕೆ ಮಂಡಿಸಲಾಯಿತು. ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಬಸವತತ್ವದ ಅನುಯಾಯಿಗಳು ಹಾಗೂ ಮಠಾಧೀಶರ ಬಗ್ಗೆ ಈಚೆಗೆ ಅವಹೇಳನ ಮಾಡಿರುವುದನ್ನು ಖಂಡಿಸಲಾಯಿತು. ಅವರು ಶೀಘ್ರ ತಪ್ಪೊಪ್ಪಿಕೊಂಡು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಯಿತು. ಸಭಿಕರು ಚಪ್ಪಾಳೆ ತಟ್ಟಿ ಒಪ್ಪಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.