ADVERTISEMENT

ಲಿಂಗಾಯತ ಧರ್ಮ ಎಂದು ಬರೆಯಿಸಿ: ಬಸವರಾಜ ಬುಳ್ಳಾ

ಶರಣ ವಿಜಯೋತ್ಸವದ ಹಿರಿಯರ ಸಮಾವೇಶದಲ್ಲಿ ಬಸವರಾಜ ಬುಳ್ಳಾ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:58 IST
Last Updated 27 ಸೆಪ್ಟೆಂಬರ್ 2025, 4:58 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಶರಣ ವಿಜಯೋತ್ಸವದ ಐದನೇ ದಿನದ ಹಿರಿಯ ನಾಗರಿಕರ ಸಮಾವೇಶದ ಉದ್ಘಾಟನೆಯಲ್ಲಿ ಅಕ್ಕ ಗಂಗಾಂಬಿಕಾ, ಪ್ರೊ.ಶಿವರಾಜ ಪಾಟೀಲ, ಪ್ರೊ.ಸಿ.ಬಿ.ಪ್ರತಾಪುರೆ, ಎಸ್.ಜಿ.ಕರ್ಣೆ, ರಾಜಕುಮಾರ ಶಿರಗಾಪುರ ಇದ್ದರು
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಶರಣ ವಿಜಯೋತ್ಸವದ ಐದನೇ ದಿನದ ಹಿರಿಯ ನಾಗರಿಕರ ಸಮಾವೇಶದ ಉದ್ಘಾಟನೆಯಲ್ಲಿ ಅಕ್ಕ ಗಂಗಾಂಬಿಕಾ, ಪ್ರೊ.ಶಿವರಾಜ ಪಾಟೀಲ, ಪ್ರೊ.ಸಿ.ಬಿ.ಪ್ರತಾಪುರೆ, ಎಸ್.ಜಿ.ಕರ್ಣೆ, ರಾಜಕುಮಾರ ಶಿರಗಾಪುರ ಇದ್ದರು   

ಬಸವಕಲ್ಯಾಣ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ನಿರ್ಭಯವಾಗಿ ಲಿಂಗಾಯತ ಎಂದೇ ಬರೆಸಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಸಲಹೆ ನೀಡಿದ್ದಾರೆ.

ನಗರದ ಶರಣ ಹರಳಯ್ಯ ಗವಿಯಲ್ಲಿ ಶುಕ್ರವಾರ ನಡೆದ ಶರಣ ವಿಜಯೋತ್ಸವದ ಹಿರಿಯರ ಸಮಾವೇಶದಲ್ಲಿ ಅವರು ಮಾತನಾಡಿ, ‘ಬಸವಣ್ಣನವರೇ ನಮ್ಮ ಧರ್ಮಗುರು. ವಚನ ಸಾಹಿತ್ಯವೇ ಧರ್ಮಗ್ರಂಥವಾಗಿದೆ. ಲಿಂಗಾಯತರು ಏಕದೇವೋಪಾಸಕರು. ಲಿಂಗಾಯತ ಸ್ವತಂತ್ರ ಧರ್ಮವಾಗಿದೆ’ ಎಂದು ಹೇಳಿದರು.

ಪ್ರೊ.ಶಿವರಾಜ ಪಾಟೀಲ ಮಾತನಾಡಿ, ‘ಹಿರಿಯರ ವಾಸದಿಂದ ಮನೆಗೊಂದು ವಿಶಿಷ್ಟ ಕಳೆ ಬರುತ್ತದೆ. ಅವರ ಮಾರ್ಗದರ್ಶನದಿಂದ ಸಂಸಾರ ಸುಖಿ ಆಗುತ್ತದೆ. ಹಿರಿಯರು ಕುಟುಂಬಕ್ಕೆ ಕಲಶಪ್ರಾಯ ಆಗಿರುತ್ತಾರೆ. ಸಂಪ್ರದಾಯ, ಸಂಸ್ಕೃತಿಯ ಪರಿಪಾಲಕರು. ಇವರಿಂದ ಮಕ್ಕಳಲ್ಲಿ ಸದ್ವಿಚಾರ, ಸದ್ಗುಣ ಬೆಳೆಯುತ್ತದೆ. ಆದರೆ ಇದೆಲ್ಲ ಇಲ್ಲದ್ದರಿಂದ ಈಚೆಗೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಪ್ರೊ.ಸಿ.ಬಿ.ಪ್ರತಾಪುರೆ ಮಾತನಾಡಿ, ‘ಹಿರಿಯರು ತಮ್ಮ ಬೌದ್ಧಿಕ ಸಂಪತ್ತು, ದೀರ್ಘ ಕೆಲಸದ ಅನುಭವ, ಉತ್ತಮ ದೃಷ್ಟಿಕೋನ, ಯೋಜನಾ ಕೌಶಲ್ಯವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವುದು ಉತ್ತಮ. ಹಿರಿಯರನ್ನು ಕುಟುಂಬದಲ್ಲಿ ತಿರಸ್ಕಾರ ಭಾವದಿಂದ ಕಾಣುವುದು ಸರಿಯಲ್ಲ’ ಎಂದರು.

ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಮಾತನಾಡಿ, ‘ಒಳ್ಳೆಯ ಸಂಸ್ಕಾರ, ಉತ್ತಮರ ಸಂಗ ಮತ್ತು ಗುರು ಹಿರಿಯರ ಮೇಲಿನ ಭಕ್ತಿ ಗೌರವವು ಉತ್ತಮ
ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಗುತ್ತದೆ’ ಎಮದು ಹೇಳಿದರು. ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಶಿರಗಾಪುರ, ಪ್ರೊ.ಎಸ್.ಜಿ.ಕರ್ಣೆ, ಲೀಲಾ ಸಂಕಳ್ಳಿ ಮಾತನಾಡಿದರು.

ಪ್ರಮುಖರಾದ ಜಿ.ಆರ್.ಪಾಟೀಲ, ಗುರುಪಾದಪ್ಪ ಪಾಟೀಲ, ವೈಜನಾಥ ಹಳ್ಳೆಖೇಡೆ, ದೇವಿಂದ್ರಪ್ಪ ಗುಣತೂರೆ, ಬಸವರಾಜ ನರಶೆಟ್ಟಿ, ಶಿವಪುತ್ರಪ್ಪ ಔಸೆ, ರಾಜಶೇಖರ ಬಿರಾದಾರ, ಚಂದ್ರಪ್ಪ ಬಿರಾದಾರ, ಸುಲೋಚನಾ ಮಾಮಾ, ಗಂಗಮ್ಮ ಕೊಳಕೂರ, ಚಂದ್ರಕಾಂತ ಝಂಝಾ, ಧನರಾಜ ಸಾತಬಾಯಿ, ಶಕುಂತಲಾ ಕರ್ಣೆ, ಅಂಜಲಿ ಬಾಲಿಕಿಲೆ, ಸವಿತಾ ಬಾಲಿಕಿಲೆ, ಚಂಪಾವತಿ ಮಹಾಜನ ಉಪಸ್ಥಿತರಿದ್ದರು. ಶಿವಾನಿ ಶಿವದಾಸ ಸಂಗೀತ ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.