ADVERTISEMENT

ಲಿಂಗಾಯತ ಸರ್ವ ಸಮಾನತೆಯ ಧರ್ಮ

ಉಪನ್ಯಾಸಕಿ ಜಯದೇವಿ ಗಾಯಕವಾಡ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 14:39 IST
Last Updated 12 ಜನವರಿ 2021, 14:39 IST
ಬೀದರ್‌ನ ವಿದ್ಯಾನಗರದಲ್ಲಿರುವ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ 124ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮವನ್ನು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಉದ್ಘಾಟಿಸಿದರು
ಬೀದರ್‌ನ ವಿದ್ಯಾನಗರದಲ್ಲಿರುವ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ 124ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮವನ್ನು ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಉದ್ಘಾಟಿಸಿದರು   

ಬೀದರ್: ‘ಲಿಂಗಾಯತ ಧರ್ಮವು ವೈಜ್ಞಾನಿಕ, ವೈಚಾರಿಕ ಮತ್ತು ಸರ್ವ ಸಮಾನತೆಯ ಧರ್ಮವಾಗಿದೆ’ ಎಂದು ಹುಮನಾಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಜಯದೇವಿ ಗಾಯಕವಾಡ ಬಣ್ಣಿಸಿದರು.

ನಗರದ ವಿದ್ಯಾನಗರದಲ್ಲಿರುವ ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ 124ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವ ಪರಂಪರೆಯಲ್ಲಿ ಗುರುವಿಗೆ ಮಹತ್ವ ಇದೆ. ವಚನ ಸಾಹಿತ್ಯದಲ್ಲಿ ಅರಿವೇ ಗುರು ಎಂದು ಉಲ್ಲೇಖಿಸಲಾಗಿದೆ. ಅದಕ್ಕಾಗಿಯೇ ಬಸವಣ್ಣನವರು ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದು ಹೇಳಿದ್ದಾರೆ. ಭವ ಬಂಧನದಿಂದ ಮುಕ್ತಿ ಪಡೆಯಬೇಕಾದರೆ ಗುರುವಿನ ಮಾರ್ಗದರ್ಶನ, ಶಿವಪಥ ಅರಿಯಬೇಕಾದರೆ ಗುರುವಿನ ಪಥದ ಅವಶ್ಯಕತೆ ಇದೆ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ‘ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯದ ನೇತೃತ್ವವನ್ನು ಬಸವಲಿಂಗ ಪಟ್ಟದ್ದೇವರು ವಹಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರವು ಈಗಾಗಲೇ ಎರಡು ವರ್ಷಗಳಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡುವ ಭರವಸೆ ನೀಡಿರುವುದು ಸಂತಸ ತಂದಿದೆ’ ಎಂದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿ, ’ಪ್ರತಿಯೊಬ್ಬರಲ್ಲಿ ಭಗವಂತನ ಮಹಾಶಕ್ತಿ ಅಡಗಿದೆ. ಸದ್ಗುರು ಮತ್ತು ಸತ್ಸಂಗದಿಂದ ಶಕ್ತಿ ಪಡೆಯಬಹುದಾಗಿದೆ’ ಎಂದು ನುಡಿದರು.

ಪ್ರೊ ಎಸ್.ಬಿ.ಬಿರಾದಾರ ಅಧ್ಯಕ್ಷತೆ ಹಾಗೂ ಮಹಾಲಿಂಗ ಸ್ವಾಮಿ ನೇತೃತ್ವ ವಹಿಸಿದ್ದರು. ಲಲಿತಾ ಮಲ್ಲಿಕಾರ್ಜುನ ವೈರಾಗೆ, ಡಾ.ಗವಿಸಿದ್ದಪ್ಪ ಪಾಟೀಲ, ಶ್ರೀಕಾಂತ ಸ್ವಾಮಿ ಇದ್ದರು.

ರಾಜೇಶ್ವರಿ ಸಿದ್ರಾಮಶೆಟ್ಟಿ ನೃತ್ಯ ಪ್ರದರ್ಶಿಸಿದರು. ವಚನಶ್ರೀ ನೌಬಾದೆ ಮತ್ತು ಚನ್ನಬಸಪ್ಪ ನೌಬಾದೆ ವಚನ ಗಾಯನ, ಲೋಕನಾಥ ಚಾಂಗಲೇರಾ ಮತ್ತು ಬೇಬಾವತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಲ್ಪಾ ಮಜಗೆ ಸ್ವಾಗತಿಸಿದರು. ಉಮಾಕಾಂತ ಮೀಸೆ ನಿರೂಪಿಸಿದರು, ನವಲಿಂಗ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.