ADVERTISEMENT

ಬೀದರ್ ಜಿಲ್ಲೆಯ ಹಲವೆಡೆ ಶಾಂತಿಯುತ ಮತದಾನ; ಉತ್ಸಾಹದಿಂದ ಹಕ್ಕು ಚಲಾಯಿಸಿದ ಮತದಾರರು

ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 6:29 IST
Last Updated 28 ಡಿಸೆಂಬರ್ 2021, 6:29 IST
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಸರ್ಕಾರಿ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಗಾಗಿ ಮತದಾನ ಮಾಡುವುದಕ್ಕೆ ಸಾಲಿನಲ್ಲಿ ನಿಂತಿದ್ದ ಮತದಾರರು
ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಸರ್ಕಾರಿ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಗಾಗಿ ಮತದಾನ ಮಾಡುವುದಕ್ಕೆ ಸಾಲಿನಲ್ಲಿ ನಿಂತಿದ್ದ ಮತದಾರರು   

ಬೀದರ್: 2022 ರ ಮಾರ್ಚ್‍ಗೆ ಅವಧಿ ಮುಕ್ತಾಯಗೊಳ್ಳಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯ ಮತದಾನವು ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಸೋಮವಾರ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5ಕ್ಕೆ ಮುಕ್ತಾಯಗೊಂಡಿತು. ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ADVERTISEMENT

ಮೂರು ಗ್ರಾಪಂಗೆ ಸಾರ್ವತ್ರಿಕ ಚುನಾವಣೆ: 2022 ರ ಮಾರ್ಚ್‍ಗೆ ಅವಧಿ ಕೊನೆಗೊಳ್ಳಲಿರುವ ಹುಲಸೂರು ತಾಲ್ಲೂಕಿನ ಹುಲಸೂರು, ಗೋರ್ಟಾ ಹಾಗೂ ತೊಗಲೂರು ಗ್ರಾಮ ಪಂಚಾಯಿತಿಗಳ 17 ಕ್ಷೇತ್ರಗಳ 51 ಸದಸ್ಯ ಸ್ಥಾನಗಳಿಗೆ ಚುನಾವಣೆ ಜರುಗಿತು.

12 ಸ್ಥಾನಗಳಿಗೆ ಉಪ ಚುನಾವಣೆ: ವಿವಿಧ ಕಾರಣಗಳಿಂದ ತೆರವಾದ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳ ತಲಾ ಒಂದರಂತೆ ಒಟ್ಟು 12 ಸ್ಥಾನಗಳಿಗೆ ಉಪ ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವಣೆ ಅಖಾಡದಲ್ಲಿ 149 ಹಾಗೂ ಉಪ ಚುನಾವಣೆ ಕಣದಲ್ಲಿ 42 ಅಭ್ಯರ್ಥಿಗಳು ಇದ್ದಾರೆ. 30 ರಂದು ಮತ ಎಣಿಕೆ ನಡೆಯಲಿದೆ.

ಶೇ 75 ರಷ್ಟು ಮತದಾನ: ಜಿಲ್ಲೆಯ ಹುಲಸೂರು-1, ಗೋರ್ಟಾ (ಬಿ) ಹಾಗೂ ತೊಗಲೂರು ಗ್ರಾಮ ಪಂಚಾಯಿತಿಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 75.38 ರಷ್ಟು
ಮತದಾನವಾಗಿದೆ.

ಹುಲಸೂರು - 1 ರ 11 ಕ್ಷೇತ್ರಗಳ 33 ಸ್ಥಾನಗಳಿಗೆ ಶೇ 75.55, ಗೋರ್ಟಾ (ಬಿ) ಗ್ರಾಮ ಪಂಚಾಯಿತಿಯ ಎರಡು ಕ್ಷೇತ್ರಗಳ 8 ಸ್ಥಾನಗಳಿಗೆ ಶೇ 67.38 ಮತ್ತು ತೊಗಲೂರು ಗ್ರಾಮ ಪಂಚಾಯಿತಿಯ ನಾಲ್ಕು ಕ್ಷೇತ್ರಗಳ 10 ಸ್ಥಾನಗಳ ಚುನಾವಣೆಯಲ್ಲಿ ಶೇ 81.76 ರಷ್ಟು ಮಂದಿ ಮತ ಹಕ್ಕು ಚಲಾಯಿಸಿದ್ದಾರೆ.

ಉಪ ಚುನಾವಣೆಯಲ್ಲಿ ಶೇ 66.84 ರಷ್ಟು ಮತದಾನ: ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳ 12 ಕ್ಷೇತ್ರಗಳ ತಲಾ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಶೇ 66.84 ರಷ್ಟು ಮತದಾನವಾಗಿದೆ.

ಬೀದರ್ ತಾಲ್ಲೂಕಿನ ಅಷ್ಟೂರು- 2 ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇ 69.34, ಚಟ್ನಳ್ಳಿ-2 ಶೇ 67.15, ರಂಜೋಳಖೇಣಿ-3 ಶೇ 55.71, ಯದಲಾಪುರ-1 ಶೇ 82.78, ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ- 7 ಶೇ 67.89, ಮಂಠಾಳ- 8 ಶೇ 58.71, ಸಿರಗುರ ಶೇ 66.36, ಕಲಖೋರಾ ಶೇ 54.22, ಚಿಟಗುಪ್ಪ ತಾಲ್ಲೂಕಿನ ಬೋರಾಳ- 1 ಶೇ 64.88, ಭಾಲ್ಕಿ ತಾಲ್ಲೂಕಿನ ಹಲಸಿ(ಎಲ್) ಶೇ 62.70, ಔರಾದ್ ತಾಲ್ಲೂಕಿನ ದುಡಕನಾಳ ಶೇ 73.43 ಹಾಗೂ ಹುಮನಾಬಾದ್ ತಾಲ್ಲೂಕಿನ ಓತಗಿ-1 ಕ್ಷೇತ್ರದಲ್ಲಿ ಶೇ 66.71 ರಷ್ಟು ಜನ ಮತಾಧಿಕಾರ ಚಲಾವಣೆ ಮಾಡಿದ್ದಾರೆ.ಭಾಲ್ಕಿ: ಶಾಂತಿಯುತ ಮತದಾನ

ಭಾಲ್ಕಿ: ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ತಾಲ್ಲೂಕಿನ ಚಳಕಾಪೂರ, ಅಟ್ಟರ್ಗಾ, ಇಂಚೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಲ್ಲಿ ಚಳಕಾಪೂರ, ಅಟ್ಟರ್ಗಾ, ಲಾಧಾ ಗ್ರಾಮಗಳಲ್ಲಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ಇಂಚೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲಸಿ (ಎಲ್‌) ಗ್ರಾಮದಲ್ಲಿ ಸೋಮವಾರ ಮತದಾನ ಶಾಂತಿಯುತವಾಗಿ ನಡೆದಿದೆ. 1051 ಒಟ್ಟು ಮತದಾರರಲ್ಲಿ, 337 ಪುರುಷ ಮತದಾರರು, 322 ಮಹಿಳಾ ಮತದಾರರು ಸೇರಿದಂತೆ ಒಟ್ಟು 659 ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಹುಮನಾಬಾದ್: ಶೇಕಡ 66.71 ಮತದಾನ

ಹುಮನಾಬಾದ್: ತಾಲ್ಲೂಕಿನ ಚಂದನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓತಗಿ ಗ್ರಾಮದ ಒಂದು ಸದಸ್ಯ ಸ್ಥಾನಕ್ಕಾಗಿ ಸೋಮವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಮುಂಜಾನೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಿತು.

ಒಟ್ಟು 709 ಮತದಾರರಿದ್ದು, ಅದರಲ್ಲಿ ಒಟ್ಟು 473 ಜನರು ಮತದಾನ ಮಾಡಿದ್ದು, ಅದರಲ್ಲಿ ಪುರುಷರು 246 ಜನ ತಮ್ಮ ಚಲಾಯಿಸಿದರೆ, 227 ಜನ ಮಹಿಳೆಯರು ಸಹ ಮತದಾನ ಮಾಡಿದರು. ಮತದಾನ ಕೇಂದ್ರ ಸುತ್ತಲೂ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಈ ಸ್ಥಾನದ ಸದಸ್ಯರು ಮೃತಪಟ್ಟಿರುವ ಹಿನ್ನೆಲೆ ತೆರವಾದ ಈ ಸ್ಥಾನಕ್ಕೆ ಚುನಾವಣೆ ನಡೆದಿದೆ.

ದುಡಕನಾಳ ಗ್ರಾ.ಪಂ: ಶೇ 73 ಮತದಾನ

ಔರಾದ್: ತಾಲ್ಲೂಕಿನ ಬಾದಲಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಡಕನಾಳ ಗ್ರಾಮದಲ್ಲಿ ತೆರವು ಆದ ಒಂದು ಗ್ರಾಮ ಪಂಚಾಯಿತಿ ಸ್ಥಾನಕ್ಕೆ ಸೋಮವಾರ ಶಾಂತಿಯುತ ಮತದಾನ ನಡೆಯಿತು.

ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾದ ಸ್ಥಾನಕ್ಕೆ ದತ್ತಾತ್ರಿ ಸುಧಾಕರ್, ಪ್ರವೀಣ ಹಣಮಂತ ಎಂಬುವರು ಕಣದಲ್ಲಿದ್ದಾರೆ. ಒಟ್ಟು 926 ಮತದಾರರ ಪೈಕಿ 366 ಪುರುಷರು, 314 ಮಹಿಳೆಯರು ಸೇರಿದಂತೆ ಒಟ್ಟು 680 (ಶೇ.73) ಜನ ತಮ್ಮ ಮತಾಧಿಕಾರ ಚಲಾಯಿಸಿದರು. ಈ ಹಿಂದಿನ ಸದಸ್ಯ ದಾದಾರಾವ್ ಎಂಬುವರು ಕೋವಿಡ್‍ನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ತೆರವು ಸ್ಥಾನಕ್ಕೆ ಚುನಾವಣೆ ನಡೆದಿದೆ. ಇದೇ 30ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.