ADVERTISEMENT

ಲಾಕ್‍ಡೌನ್ ಸಡಿಲಿಕೆ: ಮಾರುಕಟ್ಟೆಯಲ್ಲಿ ಜನರ ಓಡಾಟ

ಕೋವಿಡ್ ಸಂಕಷ್ಟ: ಅಧಿಕ ಖರ್ಚಿಗೆ ಹಿಂದೇಟು ಹಾಕಿದ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 17:33 IST
Last Updated 14 ಜೂನ್ 2021, 17:33 IST
ಬೀದರ್‌ನ ಭಗತ್‌ಸಿಂಗ್‌ ವೃತ್ತದಲ್ಲಿ ಸೋಮವಾರ ಕಂಡುಬಂದ ಆಟೊರಿಕ್ಷಾಗಳ ಓಡಾಟ
ಬೀದರ್‌ನ ಭಗತ್‌ಸಿಂಗ್‌ ವೃತ್ತದಲ್ಲಿ ಸೋಮವಾರ ಕಂಡುಬಂದ ಆಟೊರಿಕ್ಷಾಗಳ ಓಡಾಟ   

ಬೀದರ್: ಲಾಕ್‍ಡೌನ್ ಸಡಿಲಿಕೆ ಪ್ರಯುಕ್ತ ನಗರದಲ್ಲಿ ಸೋಮವಾರ ಜನರ ಓಡಾಟ ಕಂಡುಬಂದಿತು. ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ಅಂಗಡಿಗಳ ಮಾಲೀಕರು ಗಾಂಧಿ ಗಂಜ್‌ನಲ್ಲಿರುವ ನಗರದ ಸಗಟು ಮಾರುಕಟ್ಟೆಗೆ ಬಂದು ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು.

ಈ ಹಿಂದೆ ಬೆಳಿಗ್ಗೆ 6ರಿಂದ 10ರ ವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ಇತ್ತು. ಅವಧಿ ಮಧ್ಯಾಹ್ನ 2 ಗಂಟೆ ವರೆಗೆ ವಿಸ್ತರಿಸಿದ ಕಾರಣ ಅಂಗಡಿಗಳಲ್ಲಿ ಗ್ರಾಹಕರು ಕಂಡು ಬಂದರು.

ಬಹುತೇಕ ಗ್ರಾಹಕರು ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿದರು. ಎಲೆಕ್ಟ್ರಾನಿಕ್ಸ್, ಬಟ್ಟೆ, ಪಾದರಕ್ಷೆ ಮೊದಲಾದ ಅಂಗಡಿಗಳಿಗೆ ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಭೇಟಿ ನೀಡಿದರು. ಟಿ.ವಿ, ಫ್ರಿಡ್ಜ್‌, ವಾಷಿಂಗ್ ಮಷೀನ್ ಮೊದಲಾದ ಯಂತ್ರಗಳ ವ್ಯಾಪಾರಿಗಳು ವ್ಯಾಪಾರ ಇಲ್ಲದೆ ನಿರಾಶೆ ಅನುಭವಿಸಿದರು.

ADVERTISEMENT

ಸದ್ಯ ಮದುವೆಯ ಸುಗ್ಗಿ ಕಾಲ ಇದೆ. ಜನ ವಿವಿಧ ವಸ್ತುಗಳನ್ನು ಖರೀದಿಸಬಹುದು ಎಂದು ವ್ಯಾಪಾರಿಗಳು ಅಂದುಕೊಂಡಿದ್ದರು. ಆದರೆ, ಕೋವಿಡ್ ಪ್ರಯುಕ್ತ ಜನ ದುಬಾರಿ ವಸ್ತುಗಳ ಖರೀದಿಗೆ ಮುಂದಾಗಲಿಲ್ಲ. ಕೋವಿಡ್ ಹಾಗೂ ಲಾಕ್‍ಡೌನ್‍ನಿಂದ ಮಧ್ಯಮ ವರ್ಗದವರು ಹಾಗೂ ಜನಸಾಮಾನ್ಯರು ಸಂಕಷ್ಟದಲ್ಲಿರುವುದರಿಂದ ಅಂಗಡಿಗಳು ತೆರೆದಿದ್ದರೂ ನಿರೀಕ್ಷಿತ ವ್ಯಾಪಾರ ಆಗಲಿಲ್ಲ.

‘ವ್ಯಾಪಾರ ಅವಧಿ ನಾಲ್ಕು ತಾಸು ವಿಸ್ತರಿಸಿದ ನಂತರ ಶೇ 50ರಿಂದ 60ರಷ್ಟು ವ್ಯಾಪಾರ ನಡೆದಿದೆ. ಮಾರುಕಟ್ಟೆಯಲ್ಲಿ ವ್ಯವಹಾರ ಇನ್ನೂ ಬಿರುಸು ಪಡೆದುಕೊಂಡಿಲ್ಲ. ಕೋವಿಡ್‌ನಿಂದಾಗಿ ಜನ ತೊಂದರೆಗೆ ಒಳಗಾಗಿದ್ದಾರೆ. ಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬರಬಹುದು’ ಎಂದು ಕಿರಾಣಾ ವ್ಯಾಪಾರಿ ದಿನೇಶ ಪಾಟೀಲ ಹೇಳಿದರು.

ವಿವಿಧೆಡೆಯಿಂದ ರೈತರು ನಗರದ ಮಾರುಕಟ್ಟೆಗೆ ಬಂದು ಆಹಾರಧಾನ್ಯಗಳನ್ನು ಮಾರಾಟ ಮಾಡಿದರು. ಬೀಜ, ರಸಗೊಬ್ಬರ ಖರೀದಿಸಿಕೊಂಡು ಹೋದರು.

‘ಕೋವಿಡ್‌ನಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕಿಲ್ಲ. ರೈತ ಸಂಕಷ್ಟದಲ್ಲಿದ್ದಾನೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಬೆಲೆಯಲ್ಲಿ ₹50ರಿಂದ ₹80 ಹೆಚ್ಚಳವಾಗಿದೆ. ರೈತರ ಅಗತ್ಯವಿರುವಷ್ಟು ಸಾಮಗ್ರಿಗಳನ್ನು ಮಾತ್ರ ಖರೀದಿಸಿದ್ದಾರೆ’ ಎಂದು ನಾಗೂರ ಗ್ರಾಮದ ಉಮಾಕಾಂತ ಕಾರಬಾರಿ ಹೇಳಿದರು.

ರಾಜ್ಯ ಸರ್ಕಾರ ಲಾಕ್‍ಡೌನ್‍ನಲ್ಲಿ ಕೆಲ ಸಡಿಲಿಕೆ ನೀಡಿದ ಕಾರಣ ಜನರಲ್ಲಿ ಉತ್ಸಾಹ ಕಂಡು ಬಂದಿತು. ಅನೇಕ ಜನ ಬೈಕ್, ಕಾರುಗಳಲ್ಲಿ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹಾಗೂ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ಆಟೊ, ದ್ವಿಚಕ್ರ ವಾಹನಗಳು ಸಂಚರಿಸಿದವು.

ಬಂದ್‌ ಮಾಡಿಸಲು ಹರಸಾಹಸ

ಲಾಕ್‍ಡೌನ್ ಸಡಿಲಿಕೆಗೊಳಿಸಿದ್ದರಿಂದ ಏಕಮುಖ ರಸ್ತೆಯನ್ನೂ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಡಾ.ಅಂಬೇಡ್ಕರ್‌ ವೃತ್ತ, ಭಗತ್‌ಸಿಂಗ್‌ ವೃತ್ತ, ಮಡಿವಾಳ ವೃತ್ತದಲ್ಲಿನ ಬ್ಯಾರಿಕೇಡ್‌ ತೆಗೆಯಲಾಗಿತ್ತು. ಮಧ್ಯಾಹ್ನ 2 ಗಂಟೆಯ ನಂತರ ಮತ್ತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಯಿತು.

ರಸ್ತೆಯ ಬದಿಯ ಚಹಾ ಅಂಗಡಿಗಳು ತೆರೆದುಕೊಂಡಿದ್ದವು. ಜನ ಅಲ್ಲಲ್ಲಿ ಗುಂಪು ಗುಂಪಾಗಿ ನಿಂತಿದ್ದರು. ಮಧ್ಯಾಹ್ನ 2 ಗಂಟೆಯ ನಂತರವೂ ಜನ ಓಡಾಟ ಮುಂದುವರಿಸಿದ್ದರಿಂದ ಪೊಲೀಸರು ಸ್ಥಳಕ್ಕೆ ಬಂದು ಎಚ್ಚರಿಕೆ ನೀಡಿ ಕಳಿಸಿಕೊಟ್ಟರು. ಅಂಗಡಿಗಳನ್ನು ಬಂದ್‌ ಮಾಡಿಸಿದರು.

ಪೊಲೀಸ್‌ ಗಸ್ತುವಾಹನಗಳ ಸೈರನ್‌ ಕೇಳಿ ಬರುತ್ತಿದ್ದಂತೆಯೇ ಅಂಗಡಿಗಳ ಮಾಲೀಕರು ಸೆಟರ್‌ ಎಳೆದು ಅಂಗಡಿಗಳನ್ನು ಬಂದ್‌ ಮಾಡಿದರು. ಸಂಜೆ ವೇಳೆಗೆ ಎಲ್ಲ ಅಂಗಡಿಗಳು ಬಂದ್‌ ಆಗಿದ್ದವು. ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಹಳ್ಳಿಗಳಲ್ಲಿ ಕಂಡು ಬರದ ಉತ್ಸಾಹ

ಲಾಕ್‍ಡೌನ್ ಸಡಿಲಿಕೆಗೊಳಿಸಿದರೂ ಗ್ರಾಮೀಣ ಪ್ರದೇಶದಲ್ಲಿ ಉತ್ಸಾಹ ಕಂಡು ಬರಲಿಲ್ಲ. ಜನಜೀವನ ಸಹಜವಾಗಿತ್ತು. ಚಹಾ ಅಂಗಡಿಗಳಲ್ಲಿ ಕುಳಿತು ಉಪಾಹಾರ ಸೇವಿಸಿದರು.

ಯುವಕರು ಬೈಕ್‌ನಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸಿ ಗುಂ‍‍ಪು ಗುಂಪಾಗಿ ಅಲ್ಲಲ್ಲಿ ಜಮಾಗೊಂಡಿರುವುದು ಕಂಡು ಬಂದಿತು. ಮದ್ಯ ಪ್ರಿಯರು ಮದ್ಯದ ಅಂಗಡಿಗಳಲ್ಲಿ ಎಂದಿನಂತೆ ಮದ್ಯ ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.